Monday, September 24, 2018

ಒಂದು ವಾರಾಂತ್ಯದ ಸುತ್ತಾಟದ ಬಗ್ಗೆ.

ಜುಲೈ ತಿಂಗಳ ಒಂದು ವಾರಾಂತ್ಯ ಗೆಳೆಯರ ಜೊತೆ ಸೇರಿ ಬೆಂಗಳೂರಿನಿಂದ ತಲಕಾಡು, ಬಿಳಿಗಿರಿರಂಗನಬೆಟ್ಟ, ಚಾಮರಾಜನಗರ, ಗುಂಡ್ಲುಪೇಟೆ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗು ಬಂಡೀಪುರ ಸುತ್ತಾಡಿ ಬಂದೆವು. ಅದರ ಕೆಲವು ಚಿತ್ರ ಸಹಿತ ವಿವರವನ್ನು ಈ ಕೆಳಗೆ ನೀಡಿದೆ.

ಅಂದು ಬೆಳಗ್ಗೆ 4.00 ಗಂಟೆಗೆ ಬೆಂಗಳೂರಿನಿಂದ ಕಾರಿನಲ್ಲಿ ಹೊರಟ ನಾವು, ಸುಮಾರು 6 ಗಂಟೆಗೆ ಮಂಡ್ಯ ತಲುಪಿ, ಬೆಳಗ್ಗಿನ ಉಪಹಾರ ಸೇವಿಸಿ, ಸುಮಾರು 7.30 ಗಂಟೆಗೆ ಸೋಮನಾಥಪುರ ತಲುಪಿದೆವು.

Sri Chenna Keshava Temple, Somanathapura:

ಸೋಮನಾಥಪುರದ ಶ್ರೀ ಚೆನ್ನ ಕೇಶವ ದೇವಾಲಯವನ್ನು 1258 ವರ್ಷದಲ್ಲಿ ಹೋಯ್ಸಳರ ರಾಜ ಮೂರನೇ ನರಸಿಂಹ ನ ದಂಡನಾಯಕನಾದ ಸೋಮನಾಥ ದಂಡನಾಯಕನು ಕಟ್ಟಿಸಿದ. ಈ ದೇವಾಲಯವು ಹೋಯ್ಸಳರ ಕಾಲದ ಶಿಲ್ಪಕಲೆಗೆ ಪ್ರಖ್ಯಾತಿಯನ್ನು ಹೊಂದಿದೆ. ಈಗ ಈ ದೇವಾಲಯದ ಉಸ್ತುವಾರಿಯನ್ನು Archaeological Survey of India ನೋಡಿಕೊಳ್ಳುತ್ತಿದ್ದು, ದೇವಾಲಯ ವೀಕ್ಷಣೆಯ ಸಮಯವು ಬೆಳಗ್ಗೆ 8.30 ಯಿಂದ ಸಂಜೆ 5.30 ವರೆಗೆ  ಇರುತ್ತದೆ. ನಾವು ಅವಧಿಗೆ 1 ಗಂಟೆ ಮುಂಚೆಯೆ ತಲುಪಿದ್ದರಿಂದ ಮತ್ತೆ ಮುಂದಿನ ಸ್ಥಳಗಳನ್ನು ನೋಡಲು ಸಮಯಾವಕಾಶ ಕಡಿಮೆಯಾಗುವ ಸಂಭವವಿದ್ದುದರಿಂದ ಗೇಟ್ ಹೊರಗಿನಿಂದಲೇ ನೋಡಿ ತಲಕಾಡು ದಾರಿ ಹಿಡಿದೆವು.


Talakadu:

 ಬೆಂಗಳೂರಿನಿಂದ ಸುಮಾರು 135 ಕಿ.ಮೀ ಹಾಗು ಮೈಸೂರಿನಿಂದ ಸುಮಾರು 45 ಕಿ.ಮೀ ದೂರದಲ್ಲಿದೆ. ಕಾವೇರಿ ನದಿಯ ದಡದಲ್ಲಿರುವ ತಲಕಾಡು ಐತಿಹಾಸಿಕವಾಗಿಯೂ, ಪ್ರೇಕ್ಷಣಿಯವಾಗಿಯೂ ಇರುವ ಸ್ಥಳ. ಸೋಮನಾಥಪುರದಿಂದ ತಲಕಾಡಿಗೆ ಸುಮಾರು 25 ಕಿ.ಮೀ ದೂರವಾಗುತ್ತದೆ. ತಲಕಾಡು ದೇವಾಲಯಗಳಿಗೆ ಪ್ರಸಿದ್ಧವಾದ ಸ್ಥಳ. ಕಾವೇರಿ ನದಿಯ ದಮಡೆಯಲ್ಲಿರುವ ಹೆಚ್ಚಿನ ದೇವಾಲಯಗಳು ಮರಳಿನಿಂದ ಆವೃತವಾಗಿದೆ. ಇಲ್ಲಿ ಕಾವೇರಿ ನದಿಯಲ್ಲಿ ತೆಪ್ಪ ಯಾನವು ತುಂಬಾ ಪ್ರಸಿದ್ಧವಾಗಿದೆ. ವಾರಾಂತ್ಯಗಳಲ್ಲಿ ಹೆಚ್ಚಿನ ಪ್ರಯಾಣಿಕರು ಇಲ್ಲಿಗೆ ಭೇಟಿ ನೀಡುತ್ತಾರೆ.


Keerthi Narayana Temple:

ಕೀರ್ತಿ ನಾರಾಯಣ ದೇವಾಲಯವು ಇಲ್ಲಿನ ಒಂದು ಪ್ರಸಿದ್ಧ ದೇವಾಲಯ. ಇದು ಸುತ್ತಲು ಮರಳಿನ ದಿಬ್ಬದಿಂದ ಆವರಿಸಿದೆ. ಈ ದೇವಾಲಯವು ನಕ್ಷತ್ರಾಕಾರದ ಆಯದ ಮೇಲೆ ನಿರ್ಮಿಸಲಾಗಿದೆ. ಈ ದೇವಾಲಯವನ್ನು ಸಂಪೂರ್ಣವಾಗಿ ಕಲ್ಲಿನಿಂದಲೇ ನಿರ್ಮಿಸಲಾಗಿದ್ದು, ಮನಮೋಹಕ ಶಿಲ್ಪಕಲಾಕೃತಿಗಳನ್ನು ಕಾಣಬಹುದು. ಇದರ ಮುಂಬಾಗದಲ್ಲಿರುವ ಮಹಾದ್ವಾರ ಮಂಟಪದಲ್ಲಿ ಸುಂದರವಾದ ಶಿಲ್ಪಗಳನ್ನು ಕೆತ್ತಲಾಗಿದೆ. ಆಂದಿನ ಕಾಲದ ರಾಜರು ಶಿಲ್ಪಕಲೆಗಳಿಗೆ ನಿಡುತ್ತಿದ್ದ ಪ್ರೋತ್ಸಾಹವನ್ನು ನಾವಿಂದು ಅನುಭವಿಸಬಹುದಾಗಿದೆ.

                                                  



ದೇವಾಲಯದ ನಿರ್ಮಾಣದಲ್ಲಿ ಕೆತ್ತಲಾದ ಶಿಲ್ಪ ಕೃತಿ.







ಕೀರ್ತೀ ನಾರಾಯಣ ದೇವಾಲಯದ ಮುಂದಿರುವ ಮಹಾದ್ವಾರ.


ತಲಕಾಡಿನಲ್ಲಿ ಪಾತಾಳೇಶ್ವರ, ಮರುಳೇಶ್ವರ, ಆರ್ಕೇಶ್ವರ, ವೈಧ್ಯನಾಥೇಶ್ವರ ದೇವಾಲಯಗಳನ್ನು ಹಾಗು ಉಕ್ಕಿ ಹರಿಯುತ್ತಿದ್ದ ಕಾವೇರಿ ನದಿಯನ್ನು ವೀಕ್ಷಿಸಿ, ಚಾಮರಾಜನಗರದ ಕಡೆ ಹೊರಟೆವು.












                        

                        

ತಲಕಾಡುವಿನಲ್ಲಿ ತುಂಬಿ ಹರಿಯುತಿಹ ಕಾವೇರಿ ನದಿಯ ಸೊಬಗು. 


ಕಾರ್ಮುಗಿಲಿನಿಂದಾವೃತ್ತವಾದ ಬಾನು... ಚಾಮರಾಜನಗರದ ಕಡೆ ಹೊರಟ ಪಯಣದಲ್ಲಿ ಕಂಡಂತೆ.


Biligiri Rangana Hills:

ಚಾಮರಾಜನಗರ ಜಿಲ್ಲೆಯ ಯಳಂದೂರು ವ್ಯಾಪ್ತಿಯಲ್ಲಿರುವ ಬಿಳಿಗಿರಿರಂಗನ ಬೆಟ್ಟ ಅಥವಾ ಬಿ.ಆರ್ ಹಿಲ್ಸ್ ಒಂದು ಪ್ರಸಿದ್ಧವಾದ ಗಿರಿಧಾಮ/ಗಿರಿಶಿಖರ ಹಾಗು ಯಾತ್ರಸ್ಥಳ. ಇದು ಬೆಂಗಳೂರಿನಿಂದ ಸುಮಾರು 180 ಕಿ.ಮೀ ಹಾಗು  ಮೈಸೂರಿನಿಂದ ಸುಮಾರು 80 ಕಿ.ಮೀ ದೂರದಲ್ಲಿದೆ. ಈ ಬೆಟ್ಟವು ಬಿಳಿಗಿರಿ ರಂಗನ ವನ್ಯಜೀವಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿದೆ. 2011 ರಿಂದ ಈ ಪ್ರದೇಶವು ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಣೆಯಾಗಿದೆ. 


ಕಾರ್ಮೋಡ ಕವಿದ ಕಾಡಿನೊಳಗಿನ ಪಯಣದಲ್ಲಿ ಕಂಡ ಸೊಬಗು.



ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ.


ಬಿಳಿಗಿರಿ ರಂಗನ ಬೆಟ್ಟಕ್ಕೆ ಹೋಗುವ ಹಾಗು ಅಲ್ಲಿಂದ ಕೆ.ಗುಡಿ ಯಾಗಿ ಗುಂಡ್ಲುಪೇಟೆ ಗೆ ಸಾಗುವ ಕಾಡಿನೊಳಗಿನ ಪಯಾಣವೇ ಅದ್ಭುತ ಹಾಗು ರೋಮಾಂಚನಕಾರಿ. ಕಾಂಕ್ರೀಟ್ ಕಾಡಿನಿಂದ ನೈಜ ಹಸುರು ಕಾಡಿನಲ್ಲಿ ಸಾಗುವುದೇ ಒಂದು ಸುಂದರ ಅನುಭವ. ನಮ್ಮ ಪಶ್ಚಿಮ ಘಟ್ಟದ ಸೊಬಗಿಗು ಇಲ್ಲಿನ ಕಾಡಿನ ಸೊಬಗಿಗು ಅರೇ... ಎಂಥ ವ್ಯತ್ಯಾಸ. ಅದಕ್ಕೆ ಇಲ್ಲಿ ಕಾಡು ಪ್ರಾಣಿಗಳು ಜಾಸ್ತಿ. 




Indian Bison.


ಕೆ.ಗುಡಿಯಲ್ಲಿ ಆನೆಯೇರಿದ ಮಾವುತ.

                                   

ಗುಂಡ್ಲುಪೇಟೆಯ ಪಕ್ಕದ ಹಳ್ಳಿಯ ಹೊಲದಲ್ಲಿ ಬೆಳೆದ ಸೂರ್ಯಕಾಂತಿ ಬೆಳೆ.


ಮೊದಲ ದಿನ ಅಂತ್ಯಕ್ಕೆ ಗುಂಡ್ಲುಪೇಟೆಗೆ ಬಂದಿಳಿದು, ಆ ದಿನ ರಾತ್ರಿ ಗುಂಡ್ಲುಪೇಟೆಯಲ್ಲಿ ಕಳೆದೆವು. ಮಾರನೇಯ ದಿನ ಮುಂಜಾವಿಗೆ ಎದ್ದು ಸಫಾರಿಗಾಗಿ ಬಂಡೀಪುರದ ಕಡೆ ಪ್ರಯಾಣಿಸಿದೆವು.

Safari @ Bandipura Tiger Reserve :


ರಾಷ್ಟ್ರೀಯ ಹೆದ್ದಾರಿ 67 ರಲ್ಲಿ ಮೈಸೂರು-ಊಟಿ ರಸ್ತೆಯಲ್ಲಿರುವ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರದೇಶವು ಬಂಡೀಪುರ ಅಭಯಾಣ್ಯ ವ್ಯಾಪ್ತಿಯಲ್ಲಿ ಬರುತ್ತದೆ. ಈ ಪ್ರದೇಶವು ಸುಮಾರು 912 ಘ.ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಈ ಅಭಯಾರಣ್ಯವು ತಮಿಳುನಾಡು ಹಾಗು ಕೇರಳಗಳನ್ನು ತಾಗಿಕೊಂಡಿದೆ. 
ಬೆಳಗ್ಗೆ ಸುಮಾರು 6.30 ಗೆ ಬಂಡೀಪುರ ಹುಲಿ ಸಂರಕ್ಷಣಾ ಅರಣ್ಯ ಪ್ರದೇಶದ ಅರಣ್ಯ ಇಲಾಖೆಯ ಸ್ವಾಗತ ಕೊಠಡಿಯಲ್ಲಿ ಟಿಕೆಟ್ ಪಡೆದು, ನಾವು ಏರಬೇಕಾದ ವಾಹನಕ್ಕಾಗಿ ಕಾದುಕುಳಿತೆವು. ಸಫಾರಿ ಮಾಡಬೇಕಾದ ವಾಹನದಲ್ಲಿ ನಿಗದಿಪಡಿಸಿದ ಸೀಟ್ ನಲ್ಲಿ ಕುಳಿತು ಸಫಾರಿ ಹೊರಟೆವು. ಕಾಡಿನಲ್ಲಿ ಸಾಗಿದ ನಮಗೆ ಜಿಂಕೆ, ಸಿಂಗಳೀಕ, ಕಾಡು ಕೋಳಿ, ನವಿಲುಗಳನ್ನು ಮಾತ್ರ ನೋಡಲು ಸಾಧ್ಯವಾಯಿತು. ಸ್ನಾನ ಮಾಡದ ಬಸ್ ಹತ್ತಿದ್ದರಿಂದ ಹುಲಿ,ಕಾಡುಕೋಣ, ಆನೆಗಳನ್ನು  ಕಾಣಲು ಅಸಾಧ್ಯವಾಯಿತು. ಸುಮಾರು 1-1.30 ತಾಸಿನ ಸಫಾರಿಯಲ್ಲಿ ಹುಲಿಗಳ ದರ್ಶನ ಈಗ ಆಗಬಹುದೆಂದು ಕಾದಿದ್ದೆ ಬಂತು. 
ಬಂಡೀಪುರ ಅಭಯಾರಣ್ಯವು ಪ್ರವಾಸಿಗರಿಗೆ, ಪೋಟೋಗ್ರಾಫರ್ ಗಳಿಗೆ ಸೂಕ್ತವಾದ ಪ್ರದೇಶ. ವಿಭಿನ್ನವಾದ ಜೀವ ಸಂಕುಲ, ಪ್ರಾಣಿ, ಪಕ್ಷಿಗಳು,  ಕಾಡು, ಮರಗಳಿಂದ ಆವೃತವಾದ ಬಂಡೀಪುರ ಅಭಯಾರಣ್ಯವು ಮನ ಮುದಗೊಳಿಸುತ್ತದೆ. 








ಏನನ್ನೋ ಯೋಚಿಸುತ್ತ, ಮರವೇರಿ ಕುಳಿತ ಸಿಂಗಳೀಕ.

Himavad Gopala Swamy Hill: 


ಗುಂಡ್ಲುಪೇಟೆ ತಾಲೂಕಿನಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಸಮುದ್ರ ಮಟ್ಟದಿಂದ ಸುಮಾರು 1450ಮೀ ಎತ್ತರದಲ್ಲಿರುವ ದಟ್ಟ ಕಾಡಿನಿಂದ ಆವೃತವಾದ  ಬೆಟ್ಟ. ಬೆಂಗಳೂರಿನಿಂದ ಸುಮಾರು 220 ಕಿ.ಮೀ ಹಾಗು ಮೈಸೂರಿನಿಂದ ಸುಮಾರು 75 ಕಿ.ಮೀ ದೂರ ಮೈಸೂರು-ಊಟಿ ರಸ್ತೆಯಲ್ಲಿ ಸಾಗಿದರೆ ರಸ್ತೆಯ ಬಲಭಾಗದಲ್ಲಿ ದೇವಸ್ಥಾನಕ್ಕೆ ಸ್ವಾಗತಿಸುವ ದ್ವಾರದ ಮೂಲಕ ಬೆಟ್ಟವನ್ನು ಸೇರಬಹುದು. ಇದೊಂದು ಪ್ರೇಕ್ಷಣೀಯ ಹಾಗು ದೇವಾಲಯವಿರುವ ಸ್ಥಳ. ಬೆಟ್ಟದ ತುದಿಯಲ್ಲಿ ಶ್ರೀ ಗೋಪಾಲಸ್ವಾಮಿ ದೇವಸ್ಥಾನವಿದ್ದು ಈ ಪ್ರದೇಶವು ಮಂಜಿನಿಂದ ಮುಸುಕಿರುವುದರಿಂದ ಹಿಮವದ್ ಗೋಪಾಲಸ್ವಾಮಿ ಬೆಟ್ಟವೆಂದು ಕರೆಯಲ್ಪಡುತ್ತದೆ. ವರ್ಷದ ಹೆಚ್ಚಿನ ಸಮಯ ಈ ಬೆಟ್ಟವು ಮಂಜಿನಿಂದ ಆವೃತವಾಗಿರುತ್ತದೆ. ಬೆಟ್ಟದ ತುದಿಯಲ್ಲಿ ಗಾಳಿಯ ವೇಗವು ರಭಸವಾಗಿದ್ದು ಹಾಗು ಮಂಜಿನಿಂದ ಆವೃತವಾಗಿರುವುದರಿಂದ ಪ್ರಕೃತಿ ಪ್ರಿಯರಿಗೆ ಇಷ್ಟವಾಗುವ ಸ್ಥಳ. ಬೆಟ್ಟವು ದಟ್ಟಕಾನನದಿಂದ ಕೂಡಿರುವುದರಿಂದ ಇಲ್ಲಿ ಕಾಡನೆಗಳ ಸಂಖ್ಯೆ ಹೆಚ್ಚಿದ್ದು ಪ್ರಯಾಣದ ಅವಧಿಯಲ್ಲಿ ಕಾಣಸಿಗುವ ಅವಕಾಶಗಳು ಇದೆ. ಇದರಿಂದಾಗಿಯೆ, ಬೆಟ್ಟಕ್ಕೆ ಹೋಗಲು ಕೇವಲ ಸರ್ಕಾರಿ ಬಸ್ ಗೆ ಮಾತ್ರವೆ ಅವಕಾಶ ಕಲ್ಪಿಸಲಾಗಿದೆ. ಖಾಸಗಿ ವಾಹನಗಳನ್ನು ಬೆಟ್ಟದ ಕೆಳಗೆ ನಿಲ್ಲಿಸಿ, ಸರ್ಕಾರಿ ಬಸ್ ಮೂಲಕ ಬೆಟ್ಟಕ್ಕೆ ಹೊಗಬಹುದು. ಬೆಟ್ಟಕ್ಕೆ ಬೆಳಗ್ಗೆ 8.30 ರಿಂದ ಸಂಜೆ 4 ಗಂಟೆವರೆಗೆ ಸರ್ಕಾರಿ ಬಸ್ ನ ಅನುಕೂಲವಿದೆ. ಒಂದು ಬಾರಿಯ ಪ್ರಯಾಣಕ್ಕೆ ರೂಪಾಯಿ 20/- ನ್ನು ಪಾವತಿಸಬೇಕಾಗುತ್ತದೆ. ಇಲ್ಲಿ ಪ್ರಯಾಣಿಕರು ಪ್ಲಾಸ್ಟಿಕ್ ಬಳಸುವುದನ್ನು ನಿಷೇದಿಸಲಾಗಿದೆ. ಬೆಟ್ಟದ ತುದಿಯಲ್ಲಿ ಯಾವುದೇ ಅಂಗಡಿಗಳು ಇರುವುದಿಲ್ಲ.  ಹಿಮವದ್ ಗೋಪಾಲ ಸ್ವಾಮಿ ಬೆಟ್ಟವು ರಮಣೀಯವಾದ ಪ್ರದೇಶವಾಗಿದೆ. ಪ್ರವಾಸಿಗರಿಗೆ ಈ ಸ್ಥಳವು ಸೂಕ್ತವಾಗಿದೆ. 




ಹಿಮವದ್ ಗೋಪಾಲ ಸ್ವಾಮಿ ಬೆಟ್ಟದಿಂದ  ಇಳಿದು ಕೆಳಗೆ ತಟ್ಟಿ ಅಂಗಡಿಯಲ್ಲಿ ಉಪಹಾರವನ್ನು ಸೇವಿಸಿ ವಾಪಸ್ ಮೈಸೂರು ಕಡೆಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದೆವು.  ಮಧ್ಯಾಹ್ನದ ಹೊತ್ತಿಗೆ ಬಿ.ಆರ್ ಕೊಪ್ಪಲು ಸೇರಿದ ನಾವು ಪ್ರಸಿದ್ಧ ಜೈಭುವನೇಶ್ವರಿ ಮಿಲ್ಟ್ರಿ ಹೋಟೇಲ್ ನಲ್ಲಿ ಹೊಟ್ಟೆ ತುಂಬ ಮಟನ್ ಬಿರಿಯಾನಿ, ಮಟನ್ ಪ್ರೈ ತಿಂದು ಬೆಂಗಳೂರಿಗೆ ಹೊರಟೆವು.


ಸಂಜೆಯ ಹೊತ್ತಿಗೆ ಬೆಂಗಳೂರು ತಲುಪಿ, ಮನೆ ಸೇರಿಕೊಂಡೆವು. ಅಂತೂ ಅಮೋಘವಾದ ಎರಡು ದಿನಗಳ ವಾರಾಂತ್ಯದ ರಜೆಯ ಮಜ ಕಳೆದುದೆ ಗೊತ್ತಾಗಲಿಲ್ಲ. ಯಾಕೋ ಮತ್ತೆ ಒಂದು ಬಾರಿ ಹೊಗಿ ಬರುವ ಉತ್ಸಾಹ.

     style="display:block; text-align:center;"
     data-ad-layout="in-article"
     data-ad-format="fluid"
     data-ad-client="ca-pub-0729840179047376"
     data-ad-slot="6793701039">




Sunday, September 23, 2018

ಒಂದು ವಾರಾಂತ್ಯದ ಸುತ್ತಾಟದ ಬಗ್ಗೆ.

ಜುಲೈ ತಿಂಗಳ ಒಂದು ವಾರಾಂತ್ಯ ಗೆಳೆಯರ ಜೊತೆ ಸೇರಿ ಬೆಂಗಳೂರಿನಿಂದ ತಲಕಾಡು, ಬಿಳಿಗಿರಿರಂಗನಬೆಟ್ಟ, ಚಾಮರಾಜನಗರ, ಗುಂಡ್ಲುಪೇಟೆ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗು ಬಂ...