Sunday, January 28, 2018

ತಿರುಗಾಟದ ಚಿತ್ರಗಳು-25


      ನನ್ನ ಗೆಳೆಯನ ಜೊತೆಗೆ 2018 ರ ಜನವರಿ 26 ರಂದು ರಾಜ್ಯೋತ್ಸವದ ದಿನ ಮುಂಜಾನೆ ಬೆಂಗಳೂರಿನ ಮತ್ತಿಕೆರೆಯಿಂದ ದ್ವಿಚಕ್ರ ವಾಹನದಲ್ಲಿ  ಹೊರಟು ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿನ ಮಧುಗಿರಿ ಕೋಟೆಯನ್ನು ಚಾರಣಿಸಿ ಬಂದೆವು. ತುಂಬಾ ದಿನಗಳ ನಂತರ ಬೈಕಿಂಗ್ ಹಾಗು ಚಾರಣವನ್ನು ಮಾಡುವ ಅವಕಾಶವು ಸಿಕ್ಕಿತ್ತು. 
ಮಧುಗಿರಿ ಬೆಟ್ಟವು ಏಕಶಿಲಾ ಬೆಟ್ಟವಾಗಿದ್ದು, ಏಷ್ಯಾದಲ್ಲಿಯೇ ಎರಡೆನೆಯ ದೊಡ್ಡ ಬೆಟ್ಟವಾಗಿದೆ. ಮಧುಗಿರಿ ಕೋಟೆಯನ್ನು ಸುಮಾರು 1600 ದಶಕದ ಕೊನೆಯಲ್ಲಿ ಗಂಗರ ಸಾಮ್ರಾಜ್ಯದ ರಾಜ ಹೀರೆ ಗೌಡರು ಕಟ್ಟಿಸಿದರು ಎಂದು ಇತಿಹಾಸವು ಹೇಳುತ್ತದೆ. ಆ ನಂತರ ಸುಮಾರು ರಾಜ ವಂಶಗಳು ಇದನ್ನು ಆಳ್ವಿಕೆ ಮಾಡಿದರು. 
    ಮಧುಗಿರಿ ಎಂದರೆ ಜೇನು ಬೆಟ್ಟ ಅರ್ಥವು ಇದೆ. ಬೆಂಗಳೂರಿನಿಂದ ಸುಮಾರು 100 ಕಿ.ಮೀ ಗಳ ದೂರದಲ್ಲಿ ಮಧುಗಿರಿ ಕೋಟೆಯಿದೆ. 
      ಬೆಟ್ಟದ ಮೇಲಿನ ಕೋಟೆ ಹಾಗು ಅಲ್ಲಿ ಕಟ್ಟಿರುವ ಕಟ್ಟಡಗಳನ್ನು ನೋಡಿದಾಗ ಆಶ್ಚರ್ಯವಾಗುತ್ತದೆ. ಯಾಕಂದರೆ ಕೆಲವೊಂದು ಕಡೆ ಬೆಟ್ಟವನ್ನು ಎರಡು ಕಾಲುಗಳಲ್ಲಿ ಹತ್ತಲು ಅಸಾಧ್ಯವಾಗಿದೆ. ಅಂತಹ ಸನ್ನಿವೇಶದಲ್ಲಿ ಅಷ್ಟೆಲ್ಲ ಸಾಮಾಗ್ರಿಗಳನ್ನು ಬೆಟ್ಟದ ಮೇಲೆ ತಂದು ಕಟ್ಟಡಗಳನ್ನು ಕಟ್ಟಿರುವುದನ್ನು ನೋಡಿದಾಗ ಸಾಮಾನ್ಯರಿಗೆ ಇದೆಲ್ಲ ಸಾಧ್ಯವಿಲ್ಲ ಅನಿಸುತ್ತದೆ. 
     ಈ ಕೋಟೆಯು ಈಗ ಸರಿಯಾದ ರಕ್ಷಣೆಯಿಲ್ಲದೆ ಜೀರ್ಣಾವಸ್ಥೆಗೆ ಸರಿಯುತ್ತಿದೆ. ಸಂಬಂಧ ಪಟ್ಟ ಇಲಾಖೆಯು ಈ ಬಗ್ಗೆ ಗಮನ ಹರಿಸಿದಲ್ಲಿ ಕೋಟೆಯನ್ನು ಹಾಗು ಇತಿಹಾಸವನ್ನು ಉಳಿಸಿಕೊಳ್ಳಬಹುದು. ಅದೇ ರೀತಿ ಬೆಟ್ಟ ಹತ್ತಲು ಬರುವ ನಾಗರೀಕರು ತಿಂದು, ಕುಡಿದ ಪ್ಲಾಸ್ಟಿಕ್, ಬಾಟಲ್ ಹಾಗು ಇತರೇ ತ್ಯಾಜ್ಯಗಳನ್ನು ಕಂಡಲ್ಲಿ ಬಿಸಾಕಿರುತ್ತಾರೆ. ಈ ಬಗ್ಗೆ ಜನರು ಹಾಗು ಸಂಬಂಧಪಟ್ಟ ಇಲಾಖೆಗಳು ಕೋಟೆಯ ಒಳಗೆ, ಸುತ್ತಮುತ್ತ ಕಸ ಬಿಸಾಕದಂತೆ ಕ್ರಮಕೈಗೊಳ್ಳುವುದು ಸೂಕ್ತ. ತಪ್ಪಿದಲ್ಲಿ ಕೋಟೆ ಪೂರ್ಣ ಕಸದ ತೊಟ್ಟಿಯಾಗುತ್ತದೆ.  
       ಚಾರಣದ ಕೆಲವು ಚಿತ್ರಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.



ಮಧುಗಿರಿ ಪೇಟೆಯಿಂದ ಕಾಣುವ ಮಧುಗಿರಿ ಬೆಟ್ಟದ ಒಂದು ನೋಟ.






ಬೆಟ್ಟದ ಒಂದು ಇಳಿಜಾರಿನಲ್ಲಿ ಕಾಣುವ ಮಧುಗಿರಿಯ ಚಿತ್ರ.





ತೀರ ಕ್ಲಿಷ್ಟವಾದ ಬೆಟ್ಟ ಹತ್ತುವ ಹಾಗು ಇಳಿಯುವ ಸ್ಥಳ. ಇಲ್ಲಿ ಎರಡು ಕಾಲುಗಳಲ್ಲಿ ಹತ್ತುವುದು, ಇಳಿಯುವುದು ಕಷ್ಟ ಸಾಧ್ಯ. 






ರಾಜ್ಯೋತ್ಸವ ಕಾರ್ಯಕ್ರಮ ಮುಗಿಸಿ ಬೆಟ್ಟ ಹತ್ತಲು ಬಂದ ಪೋರರು, ಹಾಗೆ ಪೋಟೋಗೆ ಒಂದು ಪೋಸು.


ಬೆಟ್ಟದ ಒಂದನೇ ಹಂತದಲ್ಲಿರುವ ಕಾವಲು ಕಾಯುತ್ತಿದ್ದ ಸ್ಥಳ. ಅದರ ಕೆಳಗೆ ನೀರಿನ ದೊಡ್ಡ ಹೊಂಡವಿದೆ.






ಬೆಟ್ಟದ ಮೂರನೇ ಹಂತದಿಂದ ಕ್ಯಾಮರ ಕಣ್ಣಿಗೆ ಕಂಡ ವಿಹಂಗಮ ನೋಟ


ಬೆಟ್ಟದ ತುದಿಯಲ್ಲಿ ಕಟ್ಟಿರುವ ಕೋಟೆಯ ಚಿತ್ರ.


ಒಂದು ದಿನದ ಬೈಕಿಂಗ್ ಹಾಗು ಚಾರಣ ಮುಗಿಸಿ ಮಧ್ಯಾಹ್ನದ ಹೊತ್ತಿಗೆ ಮತ್ತೆ ಬೆಂಗಳೂರನ್ನು ಸೇರಿಕೊಂಡೆವು. 
ಮಾಹಿತಿ:
1. ಸ್ಥಳ: ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣ
2. ಬೆಂಗಳೂರಿನಿಂದ ದೂರ: ಸುಮಾರು 100 ಕಿ.ಮೀ. ಬೆಂಗಳೂರಿನಿಂದ ತುಮಕೂರು ರಸ್ತೆಯಲ್ಲಿ ದಾಬಸ್ ಪೇಟೆಯಲ್ಲಿ ಬಲಕ್ಕೆ ಸುಮಾರು 58 ಕೀ.ಮಿ. ಪ್ರಯಾಣ.
3. ಭೇಟಿ ನೀಡಲು ಸರಿಯಾದ ಸಮಯ: ಬೆಳಗ್ಗೆ ಸುಮಾರು 6.30-7.00 ಗಂಟೆಗೆ ಬೆಟ್ಟ ಹತ್ತಲು ಸರಿಯಾದ ಅವಧಿ. ಬಿಸಿಲಿನಲ್ಲಿ ಬೆಟ್ಟ ಹತ್ತಲು ಕಷ್ಟ.
4. ಬೆಟ್ಟದಲ್ಲಿ ನೀರಿನ ಹಾಗು ಉಪಹಾರದ ವ್ಯವಸ್ಥೆಯಿರುವುದಿಲ್ಲ.
5. ತಿಂದು, ಕುಡಿದ ಪ್ಲಾಸ್ಟಿಕ್/ಬಾಟಲಿ ಮುಂತಾದ ಸೂಕ್ತ ಸಮಯದಲ್ಲಿ ಪ್ರಕೃತಿಯಲ್ಲಿ ಕರಗದ ಯಾವುದೇ ತ್ಯಾಜ್ಯಗಳನ್ನು ಬೆಟ್ಟ ಹಾಗು ಸುತ್ತ ಮುತ್ತ ಬಿಸಾಕದ ಹಾಗೆ ಮುತ್ತುವರ್ಜಿವಹಿಸಿಕೊಳ್ಳುವುದು ಚಾರಣಿಗರ/ಪ್ರವಾಸಿಗರ ಜವಾಬ್ದಾರಿ.

ಪದ್ಮಾವತಿ ಎಂಬ ಚಲನಚಿತ್ರದ ಬಗ್ಗೆ.

ಮೊನ್ನೆಯಷ್ಟೇ ಬಿಡುಗಡೆಯಾದ ಸಂಜಯ್ ಲೀಲಾ ಬನ್ಸಾಲಿಯವರ 'ಪದ್ಮಾವತಿ' ಹಿಂದಿ ಸಿನೆಮಾದ ಬೆಳಗಿನ ಪ್ರದರ್ಶನವನ್ನು ನೋಡಿ ಬಂದೆ. ಭಾರತೀಯ ಚಿತ್ರ ರಂಗದಲ್ಲಿ ಮೂಡಿ ಬಂದ ಅದ್ದೂರಿ ಚಲನಚಿತ್ರ ಅಂದರೆ ತಪ್ಪಾಗಲಾರದು ಎಂದು ಕೇವಲ ಸಿನೆಮಾ ಪ್ರೇಕ್ಷಕನಾಗಿ ನನಗೆ ಅನಿಸಿತು. ರಾಜಮನೆತನದ ಅದ್ದೂರಿತನವನ್ನು, ಖಿಲ್ಜಿಯ ತೀರದ ದಾಹವನ್ನು ತುಂಬಾ ಚೆನ್ನಾಗಿ ಸಿನೆಮಾದಲ್ಲಿ ತೋರಿಸಿದ್ದಾರೆ. 
             ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಹಾಗು ಶಾಹೀದ್ ಕಪೂರ್ ಮುಖ್ಯ ಭೂಮಿಕೆಯಲ್ಲಿರುವ ಪದ್ಮಾವತಿ ಚಿತ್ರವು ಪ್ರೇಕ್ಷಕರನ್ನು ಚಿತ್ರದ ಕೊನೆಯವರೆಗೆ ಎಲ್ಲೂ ಬೋರ್ ಅನಿಸದಂತೆ ಹಿಡಿದಿಟ್ಟುಕೊಳ್ಳುತ್ತದೆ.  ಚಿತ್ರದ ಪ್ರತಿಯೊಂದು ಫ್ರೇಮ್  ಕೂಡ ತುಂಬಾ ಸುಂದರವಾಗಿ ಕಾಣಿಸುತ್ತದೆ. ದೀಪಿಕಾ ಹಾಗು ಇತರರ ಉಡುಗೆ ತೊಡುಗೆಗಳು, ಅರಮನೆಯ ದೃಶ್ಯಗಳು, ಚಿತ್ರದ  ಆರಂಭದಲ್ಲಿ ತೋರಿಸುವ ಕಾಡಿನ ಚಿತ್ರಣ, ಯುದ್ಧದ ಸನ್ನಿವೇಶಗಳು, ಚಿತ್ರದ ಸಂಗೀತ, ಅದರಲ್ಲೂ 'ಗೂಮರ್' ಹಾಡಿನ ದೃಶ್ಯಗಳನ್ನು ಅತ್ಯದ್ಭುತವಾಗಿ ಬನ್ನಾಲಿಯವರು  ಕಟ್ಟಿಕೊಟ್ಟಿದ್ದಾರೆ.  
        ದೀಪಿಕಾ ಪಡುಕೋಣೆ ರಾಣಿ ಪದ್ಮಾವತಿಯಾಗಿ ಅನುರೂಪ ಸುಂದರಿಯಾಗಿ ಕಾಣಿಸುತ್ತಾರೆ. ರಾಣಿಯಾಗಿ ಅವರ ನಟನೆಯು ಅಮೋಘವಾಗಿದೆ. ಶಾಹೀದ್ ಕಪೂರ್ ರಾಜ ರತನ್ ಸಿಂಗ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇವರಿಗೆ ಸಿಕ್ಕ ಅವಕಾಶವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ.
       ಅಲ್ಲಾವುದ್ದೀನ್ ಖಿಲ್ಜಿಯಾಗಿ ರಣವೀರ್ ಸಿಂಗ್ ಅದ್ಭುತವಾಗಿ ನಟಿಸಿದ್ದಾರೆ. ಇಡೀ ಸಿನೆಮಾವೇ ಇವರ ಸುತ್ತಾನೆ ಸುತ್ತುತ್ತದೆ. ಖಿಲ್ಜಿಯಾಗಿ ಇವರಿಗಿಂತ ಚೆನ್ನಾಗಿ ಯಾರಿಂದಲೂ ನಟಿಸಲು ಸಾಧ್ಯವಿಲ್ಲವೇನೋ ಅನ್ನೋ ಹಾಗೆ ಪಾತ್ರಕ್ಕೆ ಜೀವ ತುಂಬಿದ್ದಾರೆ. ಖಿಲ್ಜಿಯ ತೀರದ ದಾಹ, ಹಪಹಪಿ, ಕ್ರೌರ್ಯಗಳನ್ನು ಅದ್ಭುತವಾಗಿ ನಟನೆಯಲ್ಲಿ ತೋರಿಸಿದ್ದಾರೆ. ಸಿನೆಮಾ ಮುಗಿಸಿ ಹೊರಬಂದ ಮೇಲು ಖಿಲ್ಜಿ ಮನದಲ್ಲಿ ಹಾಗೆ ಉಳಿದು ಬಿಡುತ್ತಾನೆ. 
          ಮಲ್ಲಿಕಾಫರ ನ ಪಾತ್ರದಲ್ಲಿ ಜಿಮ್ ಸರ್ಬ್ ತುಂಬಾ ಚೆನ್ನಾಗಿ ಪಾತ್ರ ನಿರ್ವಹಿಸಿದ್ದಾರೆ. ಇತಿಹಾಸದ ಮಲ್ಲಿಕಾಫರ ನೆನೆಪಿಗೆ ಹಾಗೆ ಬಂದು ಹೋದ. 
         ಅಂತೂ ತುಂಬಾ ವಿವಾದಗಳ ನಂತರ ಬಿಡುಗಡೆಯಾದ 'ಪದ್ಮಾವತ್' ಸಿನೆಮಾವು ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳಲು ಸಫಲವಾಗಿದೆ. 

ಒಂದು ವಾರಾಂತ್ಯದ ಸುತ್ತಾಟದ ಬಗ್ಗೆ.

ಜುಲೈ ತಿಂಗಳ ಒಂದು ವಾರಾಂತ್ಯ ಗೆಳೆಯರ ಜೊತೆ ಸೇರಿ ಬೆಂಗಳೂರಿನಿಂದ ತಲಕಾಡು, ಬಿಳಿಗಿರಿರಂಗನಬೆಟ್ಟ, ಚಾಮರಾಜನಗರ, ಗುಂಡ್ಲುಪೇಟೆ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗು ಬಂ...