Monday, December 26, 2011

ಮೇರುತಿ ಪರ್ವತದ ಕಡೆ ಪಯಣ…

ದಿನಾಂಕ 17.12.2011 ರಂದು ಪಶ್ಚಿಮ ಘಟ್ಟ ಶ್ರೇಣಿಯ ಮೇರುತಿ ಪರ್ವತವನ್ನು ಚಾರಣಿಸಲು ಸಂಜೆ 7.30ಕ್ಕೆ ಕಾಮತರ ವ್ಯಾಗೋನರ್ ಕಾರಿನಲ್ಲಿ ಮಹೇಶ ಹಾಗು ಸುಧೀರ್ ಜೊತೆ ಮೂಡಬಿದರೆಯಿಂದ ಹೊರನಾಡು ಅನ್ನಪೂರ್ಣೆಶ್ವರಿ ದೇವಸ್ಥಾನದ ಕಡೆ ಹೊರಟೆವು. ಬಜಗೋಳಿ ಚೆಕ್ ಪೋಸ್ಟಲಿ ಪಾಸ್ ಪಡೆದು ಕುದುರೆಮುಖ ಘಾಟಿಯತ್ತ ಹೊರಟೆವು. ಘಾಟಿಯ ತಿರುವುಗಳಲ್ಲಿ ಕಾಡುಪ್ರಾಣಿಗಳ ಇರುವಿಕೆಯನ್ನು ನಿರೀಕ್ಷಿಸುತ್ತಿದ್ದ ನಮಗೆ ರಸ್ತೆ ಬದಿಯಲ್ಲಿ ಅಜಾನುಬಾಹು ಕಾಡುಕೋಣ ದರ್ಶನ ಭಾಗ್ಯ ನೀಡಿದ್ದು, ಕಿವಿ ಹಿಂಡುತ್ತಿದ್ದ ಚಳಿಯನ್ನು ಓಡಿಸಿತು. ಹಾಗೆ ಸಾಗಿದ ನಮಗೆ ಲಕ್ಯಾ ಡ್ಯಾಮ್ ರಸ್ತೆಯಲ್ಲಿ ನರಿಯೊಂದು ಕಂಡಿತು. ಬಸರಿಕಲ್ ತಲುಪಿದ ನಾವು ಚೆಕ್ ಪೋಸ್ಟ್ ಬಳಿ ಬಿಸಿ ಬಿಸಿ ಕಾಫಿ ಕುಡಿದು ಒಂದಷ್ಟು ಚಳಿಯನ್ನು ಓಡಿಸಿ, ಹೊರನಾಡಿನತ್ತ ಹೊರಟೆವು, ರಾತ್ರಿ 10 ಗಂಟೆ ಹೊತ್ತಿಗೆ ಅನ್ನಪೂರ್ಣೆಶ್ವರಿ ದೇವಸ್ಥಾನ ತಲುಪಿದ ನಾವು ಒಂದು ಸುತ್ತು ಹೊಡೆದು ದೇವಸ್ಥಾನದ ಮಂಟಪದಲ್ಲಿ ಥಂಡಿ ಚಳಿಯಲ್ಲಿ ಮುದುರಿ ನಿದ್ದೆಗೆ ಜಾರಿದೆವು.

ಭಾನುವಾರ ಮುಂಜಾವು ಹೊಟ್ಟೆ ಪೂಜೆ ಮುಗಿಸಿ 7 ಗಂಟೆಗೆ ಮೇರುತಿ ಪರ್ವತದ ಕಡೆ ಹೆಜ್ಜೆ ಹಾಕಲು ಶುರುಮಾಡಿದೆವು ಹಾದಿ ತುಂಬಾ ಕಾಡು, ನೀರಿನ ಝರಿಗಳು, ಕಾಫಿ ತೋಟಗಳು, ಕಾಫಿ ತೋಟ, ಏಲಕ್ಕಿ ತೋಟ, ಮೆಟ್ಟಿಲು ಗದ್ದೆಗಳ ಮಗ್ಗುಲಲ್ಲಿ ಮನೆಗಳನ್ನು ನೋಡುತ್ತ ಸೌಂಧರ್ಯವನ್ನು ಆಸ್ವಾದಿಸಿದೆವು.

ನಾನು ಮಹೇಶ ಮಾತ್ನಡುತ್ತಾ ಹಳೆ ನೆನೆಪುಗಳನ್ನ ಕೆದಕುತ್ತಾ ಸಾಗಿದೆವು. ಚಾರಣದ ಮಧ್ಯ ಮುಂದಿನ ದಾರಿಯ ಬಗ್ಗೆ ಅಲ್ಲಲ್ಲಿ ವಿಚಾರಿಸುತ್ತಾ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿದೆವು. ಸುಧೀರ್ ಹಾಗು ಕಾಮತರು ಕುದುರೆಮುಖ ಬೆಟ್ಟಗಳನ್ನು ತೋರಿಸುತ್ತ ಮಾಹಿತಿಗಳನ್ನು ನಿಡುತ್ತಿದ್ದರು,

ಪ್ರಕೃತಿ ಸೌಂಧರ್ಯವನ್ನು ಅನುಭವಿಸುತ್ತಾ ಸುಮಾರು 9 ಗಂಟೆ ಹೊತ್ತಿಗೆ ಬದನೆಕಾನ ಎಸ್ಟೇಟ್ ತಲುಪಿದೆವು. ಬದನೆಕಾನ ಎಸ್ಟೇಟ್ ಸುಮಾರು 1000 ಎಕ್ರೆ ವಿಸ್ತಾರವಾದ ಕಾಫಿ ಎಸ್ಟೇಟ್. ಕಣ್ಣು ಹಾಯಿಸಿದಷ್ಟು ದೂರ ಚಾಚಿದ ಕಾಫಿ ತೋಟ… ಅಲ್ಲಿ ಸಿಕ್ಕಿದ ವ್ಯಕ್ತಿ ಜತೆ ಮಾತ್ನಾಡತಾ, ಎರಡು ದಿನಗಳ ಹಿಂದೆ ಅಷ್ಟೇ ಹುಲಿಯೊಂದು ದನವನ್ನು ಕೊಂದು ತಿಂದು ಹೋಯಿತೆಂದು ಜಾಗ್ರತೆಯಾಗಿ ಹೋಗಿರೆಂದು ಹೇಳಿದರು. ಅಲ್ಲೇ, ವಾಟರ್ ಬಾಟಲ್ ಗೆ ಕುಡಿಯುವ ನೀರು ತುಂಬಿಸಿಕೊಂಡು ಮೇರುತಿ ಪರ್ವತವನ್ನು ಕಾಣಲು ಚಾರಣಿಸಿದೆವು.

ಅಂದಾಜು 10 ಗಂಟೆಗೆ ಮೇರುತಿ ಪರ್ವತದ ಮಗ್ಗುಲಿಗೆ ತಲಿಪಿದೆವು. ಅಲ್ಲಿಂದ ಮೇರುತಿ ಕಾನ ಚಹಾ ಎಸ್ಟೇಟ್ ನ ಸೊಬಗು ಅವಿಸ್ಮರಣೀಯ. ಹತ್ತಿದಸ್ಟು ಮುಗಿಯದ ಪರ್ವತ ಶ್ರೇಣಿ,… ಸುಂದರ, ಮನೋಹರ ದೃಶ್ಯಗಳು… ಅವಿಸ್ಮರಣೀಯ…

ಮೇರುತಿಯ ತುದಿ ತಲುಪುತ್ತಾ ದಣಿವೆಲ್ಲಾ ಮಾಯಾ ಮಾಯ… ಪರ್ವತದ ಪೂರ್ವದ ಕೆಳಗೆ ಮೇರುತಿ ಕಾನ ಚಹಾ ಎಸ್ಟೇಟ್ ಹಾಗು ಬಸರಿಕಟ್ಟೆ ಪೇಟೆ. ಪಶ್ಚಿಮದ ಕಡೆ ಬದನೆಕಾನ ಎಸ್ಟೇಟ್ ಹಾಗು ದೂರದಲ್ಲಿ ಹೊರನಾಡು. ಪೂರ್ವಕ್ಕೆ ಕೆಳಗೆ ಇಳಿದರೆ ಬಸರಿಕಟ್ಟೆ ಪೇಟೆಗೂ ಹೊಗುವುದು ಸಾಧ್ಯ.

ಮೇರುತಿ ಪರ್ವತವನ್ನು ಹೊರನಾಡು ಹಾಗು ಬಸರಿಕಟ್ಟೆಯಿಂದಲೂ ಚಾರಣಿಸಬಹುದು. ಬದನೆಕಾನ ಎಸ್ಟೇಟ್ ವರೆಗೆ ಚತುಷ್ಚಕ್ರ ವಾಹನದಲ್ಲೂ ಹೋಗಿ ಅಲ್ಲಿಂದ 30 ನಿಮಿಷ ಚಾರಣಿಸಿದರೆ ಮೇರುತಿಯ ಮಗ್ಗುಲಿಗೆ ಸೇರಬಹುದು.

ಹೊರನಾಡಿನಿಂದ ಮೇರುತಿಯನ್ನು ಅಂದಾಜು 3 ಗಂಟೆಯಲ್ಲಿ ಚಾರಣಿಸಬಹುದು. ದಾರಿಯಲ್ಲಿ ಸಿಗೋ ಜನರಲ್ಲಿ ಮಾಹಿತಿ ಕೇಳ್ಕೊಂಡು ಸಾಗಬಹುದು.

ಹಾಗೆ ಬರುತ್ತಾ ಹಾದಿ ಹೋಕರು ಪಕ್ಕದಲ್ಲೋಂದು ಜಲಪಾತ ಇರೋ ಬಗ್ಗೆ ಮಾಹಿತಿ ಕೊಟ್ಟರು… ಚಾರಣದಲ್ಲಿ ಪೂರ್ಣ ಅಡ್ರಸ್ ಇಲ್ಲದ ಗುರಿ ತಲುಪುವುದೆ ಮಜಾ… ಹಾಗೆ ಜಲಪಾತವನ್ನು ಹುಡುಕಿ ದಾರಿ ಮಾಡಿಕೊಂಡು, ಗುಡ್ಡಗಳನ್ನು ಸುತ್ತಾಡಿ ಹೊರಟವರಿಗೆ…. ಕಂಡಿದ್ದು ರಮಣೀಯ ಜಲಪಾತ….

ಚಾರಣದಲ್ಲಿ ಪ್ರಕೃತಿಯ ಅಧ್ಬುತ ದೃಶ್ಯಗಳನ್ನು ಕಾಣುವ ಹಾಗು ಅನುಭವಿಸುವುದೇ ಸೌಭಾಗ್ಯ… ಮಧ್ಯಾಹ್ನ 2 ಗಂಟೆ ಹೊತ್ತಿಗೆ ವಾಪಸ್ ಹೊರನಾಡು ತಲುಪಿ, ದೇವಾಸ್ಥಾನದಲ್ಲಿ ಫಲಾಹಾರವನ್ನು ಸೇವಿಸಿ ಮೂಡಬಿದರೆ ಕಡೆಗೆ ನೆನೆಪುಗಳನ್ನು ಮೆಲುಕುತ್ತಾ ಬಂದೆವು.

ಹೊರನಾಡಿಗೆ ತಲುಪುವುದು:-

ಮೇರುತಿ ಪರ್ವತವು ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಶ್ರೀ ಅನ್ನಪೂರ್ಣೇಶ್ವರೀ ಕ್ಷೇತ್ರಕ್ಕೆ ಹತ್ತಿರವಾಗುತ್ತದೆ. ಮಂಗಳೂರಿನಿಂದ ಹೊರನಾಡಿಗೆ ಬಂದು ಇಳಿದುಕೊಂಡು ಮುಂಜಾವು ಚಾರಣಕ್ಕೆ ಹೊರಡುವುದು ಅನುಕೂಲ ಅಥವಾ ಬೆಂಗಳೂರು ಕಡೆಯಿಂದ ಬರುವುದಾದರೆ ರಾತ್ರಿ ಹೊರಟು ಮುಂಜಾವು ಶ್ರೀ ಕ್ಷೇತ್ರಕ್ಕೆ ಬಂದು ಹೊರಡಬಹುದು. ಬೆಂಗಳೂರಿನಿಂದ ರಾಜಹಂಸ/ ಎಕ್ಸಪ್ರೆಸ್ ಬಸ್ ಗಳ ವ್ಯವಸ್ಥೆಯಿದೆ. ಹೊರನಾಡಿನಲ್ಲಿ ಉಳಿದುಕೊಳ್ಳಲು ಛತ್ರ / ಲಾಡ್ಜ್ ವ್ಯವಸ್ಥೆಯಿದೆ. ಊಟ ಉಪಹಾರಗಳಿಗೂ ಅನುಕೂಲವಿದೆ.

ನೀವೂ ಒಂದ್ಸಲ ನೀವು ಹೋಗಿ ಬನ್ನಿ

ನಾ ಕ್ಲಿಕ್ಕಿಸಿದ ಕೆಲವು ಪೋಟೋ ಮಾಹಿತಿಗಳು ನಿಮಗೂ ಕೂಡ….




ಒಂದು ವಾರಾಂತ್ಯದ ಸುತ್ತಾಟದ ಬಗ್ಗೆ.

ಜುಲೈ ತಿಂಗಳ ಒಂದು ವಾರಾಂತ್ಯ ಗೆಳೆಯರ ಜೊತೆ ಸೇರಿ ಬೆಂಗಳೂರಿನಿಂದ ತಲಕಾಡು, ಬಿಳಿಗಿರಿರಂಗನಬೆಟ್ಟ, ಚಾಮರಾಜನಗರ, ಗುಂಡ್ಲುಪೇಟೆ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗು ಬಂ...