ಮೊನ್ನೆಯಷ್ಟೇ ಬಿಡುಗಡೆಯಾದ ಸಂಜಯ್ ಲೀಲಾ ಬನ್ಸಾಲಿಯವರ 'ಪದ್ಮಾವತಿ' ಹಿಂದಿ ಸಿನೆಮಾದ ಬೆಳಗಿನ ಪ್ರದರ್ಶನವನ್ನು ನೋಡಿ ಬಂದೆ. ಭಾರತೀಯ ಚಿತ್ರ ರಂಗದಲ್ಲಿ ಮೂಡಿ ಬಂದ ಅದ್ದೂರಿ ಚಲನಚಿತ್ರ ಅಂದರೆ ತಪ್ಪಾಗಲಾರದು ಎಂದು ಕೇವಲ ಸಿನೆಮಾ ಪ್ರೇಕ್ಷಕನಾಗಿ ನನಗೆ ಅನಿಸಿತು. ರಾಜಮನೆತನದ ಅದ್ದೂರಿತನವನ್ನು, ಖಿಲ್ಜಿಯ ತೀರದ ದಾಹವನ್ನು ತುಂಬಾ ಚೆನ್ನಾಗಿ ಸಿನೆಮಾದಲ್ಲಿ ತೋರಿಸಿದ್ದಾರೆ.
ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಹಾಗು ಶಾಹೀದ್ ಕಪೂರ್ ಮುಖ್ಯ ಭೂಮಿಕೆಯಲ್ಲಿರುವ ಪದ್ಮಾವತಿ ಚಿತ್ರವು ಪ್ರೇಕ್ಷಕರನ್ನು ಚಿತ್ರದ ಕೊನೆಯವರೆಗೆ ಎಲ್ಲೂ ಬೋರ್ ಅನಿಸದಂತೆ ಹಿಡಿದಿಟ್ಟುಕೊಳ್ಳುತ್ತದೆ. ಚಿತ್ರದ ಪ್ರತಿಯೊಂದು ಫ್ರೇಮ್ ಕೂಡ ತುಂಬಾ ಸುಂದರವಾಗಿ ಕಾಣಿಸುತ್ತದೆ. ದೀಪಿಕಾ ಹಾಗು ಇತರರ ಉಡುಗೆ ತೊಡುಗೆಗಳು, ಅರಮನೆಯ ದೃಶ್ಯಗಳು, ಚಿತ್ರದ ಆರಂಭದಲ್ಲಿ ತೋರಿಸುವ ಕಾಡಿನ ಚಿತ್ರಣ, ಯುದ್ಧದ ಸನ್ನಿವೇಶಗಳು, ಚಿತ್ರದ ಸಂಗೀತ, ಅದರಲ್ಲೂ 'ಗೂಮರ್' ಹಾಡಿನ ದೃಶ್ಯಗಳನ್ನು ಅತ್ಯದ್ಭುತವಾಗಿ ಬನ್ನಾಲಿಯವರು ಕಟ್ಟಿಕೊಟ್ಟಿದ್ದಾರೆ.
ದೀಪಿಕಾ ಪಡುಕೋಣೆ ರಾಣಿ ಪದ್ಮಾವತಿಯಾಗಿ ಅನುರೂಪ ಸುಂದರಿಯಾಗಿ ಕಾಣಿಸುತ್ತಾರೆ. ರಾಣಿಯಾಗಿ ಅವರ ನಟನೆಯು ಅಮೋಘವಾಗಿದೆ. ಶಾಹೀದ್ ಕಪೂರ್ ರಾಜ ರತನ್ ಸಿಂಗ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇವರಿಗೆ ಸಿಕ್ಕ ಅವಕಾಶವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ.
ಅಲ್ಲಾವುದ್ದೀನ್ ಖಿಲ್ಜಿಯಾಗಿ ರಣವೀರ್ ಸಿಂಗ್ ಅದ್ಭುತವಾಗಿ ನಟಿಸಿದ್ದಾರೆ. ಇಡೀ ಸಿನೆಮಾವೇ ಇವರ ಸುತ್ತಾನೆ ಸುತ್ತುತ್ತದೆ. ಖಿಲ್ಜಿಯಾಗಿ ಇವರಿಗಿಂತ ಚೆನ್ನಾಗಿ ಯಾರಿಂದಲೂ ನಟಿಸಲು ಸಾಧ್ಯವಿಲ್ಲವೇನೋ ಅನ್ನೋ ಹಾಗೆ ಪಾತ್ರಕ್ಕೆ ಜೀವ ತುಂಬಿದ್ದಾರೆ. ಖಿಲ್ಜಿಯ ತೀರದ ದಾಹ, ಹಪಹಪಿ, ಕ್ರೌರ್ಯಗಳನ್ನು ಅದ್ಭುತವಾಗಿ ನಟನೆಯಲ್ಲಿ ತೋರಿಸಿದ್ದಾರೆ. ಸಿನೆಮಾ ಮುಗಿಸಿ ಹೊರಬಂದ ಮೇಲು ಖಿಲ್ಜಿ ಮನದಲ್ಲಿ ಹಾಗೆ ಉಳಿದು ಬಿಡುತ್ತಾನೆ.
ಮಲ್ಲಿಕಾಫರ ನ ಪಾತ್ರದಲ್ಲಿ ಜಿಮ್ ಸರ್ಬ್ ತುಂಬಾ ಚೆನ್ನಾಗಿ ಪಾತ್ರ ನಿರ್ವಹಿಸಿದ್ದಾರೆ. ಇತಿಹಾಸದ ಮಲ್ಲಿಕಾಫರ ನೆನೆಪಿಗೆ ಹಾಗೆ ಬಂದು ಹೋದ.
ಅಂತೂ ತುಂಬಾ ವಿವಾದಗಳ ನಂತರ ಬಿಡುಗಡೆಯಾದ 'ಪದ್ಮಾವತ್' ಸಿನೆಮಾವು ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳಲು ಸಫಲವಾಗಿದೆ.
No comments:
Post a Comment