ವಿಶ್ವ ಸ್ನೇಹಿತರ ದಿನ, ಕುಂಭದ್ರೋಣ ಮಳೆ, ಗಡಾಯಿಕಲ್ಲು ಸವಾರಿ ಮತ್ತು ನಾವು
"When you have no light to guide you and no one to walk
beside you, I will come to you. When the night is dark and stormy, you won't
have to reach out for me, i will come to you." - Taylor Hanson.
ದಿನಾಂಕ 08 ಆಗಸ್ಟ್ 2012, ವಿಶ್ವ ಸ್ನೇಹಿತರ ದಿನ. ನಾವು ಗೆಳೆಯರು ಎಂದಿನಂತೆ ಕಾಮತ್ ರ ವ್ಯಾಗೊನರ್ ಕಾರಿನಲ್ಲಿ ಚಾರ್ಮಾಡಿಯ ತುದಿಯನ್ನು ಚಾರಣಿಸುವ ಯೋಜನೆಯೊಂದಿಗೆ ಹೊರಟೆವು. ಕಾರಿನಲ್ಲಿ ಎಲ್ಲರಿಗೂ ಎಲ್ಲರೂ ಗೆಳೆಯರ ದಿನದ ಶುಭ ಹಾರೈಸಿದೆವು. ಗುರುವಾಯನಕೆರೆಯಲ್ಲಿ ಮತ್ತೊಬ್ಬ ಚಾರಣಿಗ ರಾಕೇಶ್ ಜೊತೆಯಾದರು. ಉಜಿರೆಯಲ್ಲಿ ತಿಂಡಿ ತಿಂದು ಚಾರ್ಮಾಡಿ ಘಾಟಿಯ ಕಡೆಗೆ ಹೊರಟ ನಮ್ಮನ್ನು ಕುಂಭದ್ರೋಣದ ಮಳೆಯು ಪಂಥಾಹ್ವಾನವಾದಂತೆ ನಮ್ಮನ್ನು ಬೆಂಬತ್ತಿತ್ತು. ಚಾರ್ಮಾಡಿ ಘಾಟಿನ ಹಸಿರು ಸೊಬಗನ್ನು ಆಸ್ವಾದಿಸುತ್ತಾ, ಧುಮುಕುತ್ತಿದ್ದ ಜಲಪಾತಗಳನ್ನು ಕಣ್ ತುಂಬುತ್ತಾ ಕೊಟ್ಟಿಗೆಹಾರದ ಕಡೆ ಸಾಗಿದ ನಮಗೆ ನಿರಾಸೆಯ ಕಾರ್ಮೊಡ ಕವಿದದ್ದು ಸುಳ್ಳಲ್ಲ. ಚಾರ್ಮಾಡಿ ಘಾಟ್ ನಲ್ಲಿ ಲಾರಿಯೊಂದು ಕೆಟ್ಟು ನಿಂತು 4 ಕಿ.ಮೀ ಉದ್ದಕ್ಕೂ ನಿಂತ ವಾಹನಗಳ ಸರತಿ ಸಾಲು ನಮ್ಮ ಕೊಟ್ಟಿಗೆಹಾರದ ಹಾದಿಯನ್ನು ಮೊಟಕುಗೊಳಿಸಿತು. ಸಮಯ ಹಾಳು ಮಾಡದೆ ಹೊಸ ಯೋಜನೆಯನ್ನು ಯೋಜಿಸುತ್ತಾ ಹಿಂತಿರುಗಿ ಬಂದವರಿಗೆ ಪಕ್ಕನೆ ನೆನೆಪಾದದ್ದು ಉಜಿರೆ ಹತ್ತಿರದ ಗಡಾಯಿಕಲ್ಲು.
ವಿವರಣೆ:
ಗಡಾಯಿಕಲ್ಲು ಬೆಳ್ತಂಗಡಿಯಿಂದ ಉತ್ತರಕ್ಕೆ ಸುಮಾರು 8 ಕಿ.ಮೀ ದೂರದಲ್ಲಿದೆ. ಇದರ ಎತ್ತರವು ಸಮುದ್ರ ಮಟ್ಟಕ್ಕಿಂತ ಸುಮಾರು 1700ft. ಇದನ್ನು 'ನರಸಿಂಹ ಗಢ' ಹಾಗು 'ಜಮಾಲಾಭಾದ್ ಕೋಟೆ' ಎಂದೂ ಕರೆಯುತ್ತಾರೆ. 1794ರಲ್ಲಿ ಟಿಪ್ಪು ಸುಲ್ತಾನನು ತನ್ನ ತಾಯಿ 'ಜಮಾಲಾ ಬೀ' ಸ್ಮರಣಾರ್ಥ ಜಮಾಲಾಭಾದ್ ಕೋಟೆಯನ್ನು ಕಟ್ಟಿಸಿದ. 1799ರಲ್ಲಿ 4ನೇ ಮೈಸೂರು ಯುದ್ದದಲ್ಲಿ ಬ್ರಿಟೀಷರು ಜಮಾಲಾಬಾದ್ ಕೋಟೆಯನ್ನು ವಶಪಡಿಸಿಕೊಂಡರು.
ತುಳುವಿನಲ್ಲಿ 'ಗಡಾಯಿಕಲ್ಲು' ಎಂದರೆ 'ಕಡಾಯಿ ಯಂತಹ ಕಲ್ಲು' ಎಂದರ್ಥ, ಇದು ನೋಡಲು ಗಡಾಯಿ ತರಹನೆ ಇದೆ. ಈಗ ಈ ರಾಷ್ಟ್ರೀಯ ಸ್ಮಾರಕವು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯೊಳಗೆ ಬರುತ್ತದೆ. ಗಡಾಯಿಕಲ್ಲನ್ನು ಚಾರಣಿಸಲು ಈಗ ಪ್ರವೇಶ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಭಾರತೀಯ ವಯಸ್ಕರಿಗೆ ರೂ.20/- ಹಾಗು ವಿಧ್ಯಾರ್ಥಿಗಳಿಗೆ ರೂ.10/- ಶುಲ್ಕವನ್ನು ಅರಣ್ಯ ಇಲಾಖೆಯಿಂದ ನೇಮಿಸಿದ ಅಧಿಕಾರಿಗಳಿಗೆ ಪಾವತಿಸಿ ರಶೀದಿ ಪಡೆಯುವುದು.
ಕಾರಿನಿಂದ ಇಳಿದು ಬ್ಯಾಗ್ ಹಾಗು ಜೆರ್ಕಿನ್ ಏರಿಸಿ ಹೋರಟಾಗ ನಮ್ಮನ್ನು ಸ್ವಾಗತಿಸಿದ್ದು ಜಡಿಮಳೆ. ಜಡಿಮಳೆಗೆ ಗಡಾಯಿಕಲ್ಲನ್ನು ಹತ್ತುವಾಗ ಗಂಟೆ 11. ಬೆಟ್ಟದಿಂದ ಇಳಿಯುವ ನೀರು ಹಾಗು ಸುತ್ತಲ ಹಸಿರು ನೋಡಲು ಅಮೋಘ. ಜಡಿಮಳೆ ಹಾಗು ಜಾರುವ ಪಾಚಿಯನ್ನು ಲೆಕ್ಕಿಸದೆ ಬೆಟ್ಟವನ್ನು ಏರುವ ಆನಂದ ಅನಂತ. ಬೆಟ್ಟವಂತೂ ಮೋಡ ಮುಸುಕಿ ಕಾಣದಾಗಿತ್ತು.
"If I could plant a seed everytime I think of you, I could walk forever in my
garden."
- Dan H.
ಕೋಟೆಯನ್ನು ಕಟ್ಟಿದ ರೀತಿಯೆ ಅದ್ಬುತ, ಆ ಕಾಲದಲ್ಲಿ ಈ ಕೋಟೆಯನ್ನು ಕಟ್ಟಿದ ಜಟ್ಟಿಗಳನ್ನು ನಿಜಕ್ಕೂ ಬೇಷ್ ಅನ್ನಲೇ ಬೇಕು.
ಕಣ್ಣಿಗೆದುರಾಗಿ ಕಾಣುವ ಪಶ್ಚಿಮ ಘಟ್ಟದ ಸಾಲನ್ನು ನೋಡುತ್ತ, ಅವುಗಳ ಬಗ್ಗೆ ಮಾತಾಡುತ್ತ, ನಿಂತು ನೋಡುತ್ತ, ಬೆಟ್ಟದಿಂದಿಳಿಯುವ ನೀರನ್ನು ಕುಡಿಯುತ್ತ ಸಾಗಿದವರಿಗೆ ದಾರಿ ಸವೆಸಿದ್ದು ಗೊತ್ತೆ ಆಗಿಲ್ಲ.
ಮಳೆಗಾಲದಲ್ಲಿ ಗಡಾಯಿಕಲ್ಲನ್ನು ಹತ್ತುವ ಅನುಭವವೇ ಅಮೋಘ. ಮೈದುಂಬಿಕೊಂಡ ಹಸಿರು, ಜುಳುಜುಳು ಹರಿವ ಸ್ಪಟಿಕ ನೀರು... ಸಂತೋಷ ತುಂದಿಲರನ್ನಾಗಿಸುವುದು ಸುಳ್ಳಲ್ಲ. ಮಳೆಯೇ ಇರಲಿ, ಬೇಸಗೆಯೆ ಇರಲಿ ಗಡಾಯಿಕಲ್ಲು ನನ್ನಲ್ಲಿ ಇಂದಿಗೂ ಮೋಹವನ್ನು ಕಡಿಮೆ ಮಾಡಿಲ್ಲ.
ಬೆಟ್ಟವನ್ನು ಕೊರೆದು ಮಾಡಿದ ಮೆಟ್ಟಿಲುಗಳಲ್ಲಿ ಹರಿಯುವ ನೀರು... ಮೆಟ್ಟಿಲು ಜಲಪಾತವನ್ನೆ ಸೃಷ್ಟಿಸಿದೆ. ಈ ಮೆಟ್ಟಿಲುಗಳನ್ನು ಮಳೆಗಾಲದಲ್ಲಿ ಹತ್ತುವುದು ಮತ್ತು ಇಳಿಯಲು ಪ್ರಾಣಿಗಳಂತೆ ನಡೆಯದೆ ವಿಧಿಯಿಲ್ಲ. ಆಷ್ಟರವರೆಗೆ ಜಾರುತ್ತದೆ, ಪಾಚಿಗಟ್ಟಿದ ಮೆಟ್ಟಲುಗಳು.
ಮೇಲಿನಿಂದ ಕಾಣುವ ಭಯಬೀತರನ್ನಾಗಿಸುವ ಮೆಟ್ಟಿಲುಗಳು. ಸ್ವಲ್ಪ ಎಡವಿದರೂ ಪ್ರಾಣಕ್ಕೆ ಕುತ್ತು. ಒಂದೋ ಸ್ಮಶಾನ ಅಥವಾ ಆಸ್ಪತ್ರೆ ದರುಷನ ಗ್ಯಾರಂಟಿ.
ಕೊರೆದ ಮೆಟ್ಟಿಲನ್ನು ಹತ್ತಿದಾಗ ಸಿಗುವ ಸುಂದರ ದೃಶ್ಯ ಕಾವ್ಯ. ಬೋಳು ಮರ ಮತ್ತು ಕೋಟೆಯೊಳಗಿನ ಎಂಟ್ರಿ.
ಮೋಡವನ್ನು ಹೊದ್ದುಕೊಂಡ ಗಡಾಯಿಕಲ್ಲಿನ ಹಸಿರು ದೃಶ್ಯ.
"Friends are the Angels that help you fly"
-Julia VeRost
ಗಡಾಯಿಕಲ್ಲಿನಿಂದ ಕೆಳಗೆ ಹಾರುತಿರುವ ಮೋಡಗಳು ನೋಡಲು ಕಣ್ಣಿಗೆ ಮತ್ತು ಮನಸಿಗೆ ಹಬ್ಬದೂಟ. ತುದಿಯಲ್ಲಿ ರೊಯ್ಯ ರೊಯ್ಯನೆ ಶಬ್ದಮಾಡುತ್ತ ವೇಗವಾಗಿ ಬೀಸುತ್ತಿದ್ದ ಗಾಳಿ, ಸುರುಳಿ ಸುರುಳಿ ಸುತ್ತುತ್ತಿದ್ದ ಮರಗಳು, ಗಿಡಗಂಟಿಗಳು ಮತ್ತು ಹುಲ್ಲುಗಳು. ಅದನ್ನು ಸುಂದರವೆನ್ನ ಬೇಕೋ ಅಥವಾ ಬೀಕರವೆನ್ನ ಬೇಕೋ ತಿಳಿಯದಾಯಿತು. ಮನದಲ್ಲಿ ಹೆದರಿಕೆ, ತೋರ್ಪಡಿಸಲು ನಾಚಿಕೆ ಅಗಿದ್ದಂತೂ ಸುಳ್ಳಲ್ಲ.
ಮಂಜಿನೊಳಗಿಂದ ಇಣುಕಲು ಪ್ರಯತ್ನಿಸುತ್ತರುವ ಬೆಳಕು... ಇದನ್ನೆಲ್ಲ ಅನುಭವಿಸಿದ ನಮಗಂತೂ... ವ್ಹಾ.. ಇಂತಹ ಅವಕಾಶಗಳು ಸಾವಿರಕ್ಕೊಂದು.
ಗಡಾಯಿಕಲ್ಲಿನ ತುದಿಯಲ್ಲಿನ ನೋಟಗಳು. ಅತ್ಯದ್ಬುತ...
ಗಡಾಯಿಕಲ್ಲಿನ ಮೇಲೆ ಟಿಪ್ಪುವಿನ ಕಾಲದಲ್ಲಿ ಕಟ್ಟಿಸಿದ ಕಟ್ಟಡ
ಬೆಟ್ಟದ ಮೇಲಿರುವ ಕೆರೆ - ಮಂಜಿನಿಂದ ತುಂಬಿ ತುಳುಕಾಡುತಿರುವ ನೋಟ.
ಚಾರಣಿಸಿದ ನಾವು - ಎಡದಿಂದ ಸುದೀರ್, ಮಹೇಶ್, ನಾನು, ಕಾಮತ್, ದಾಮೋದರ್ ಮತ್ತು ಪೋಟೋ ಕ್ಲಿಕ್ಕಿಸುತ್ತಿದ್ದ ರಾಕೇಶ್.
ಪರದಾಡಿಕೊಂಡು ಇಳಿಯುತ್ತಿರುವ ಚಾರಣಿಗರು... ಮೇಲಿಂದ ನಿಂತು ಮಜಾ ಅನುಭಿಸಿದ ನಾವುಗಳು... ಇದು ಇಳಿಯುವ ದೃಶ್ಯವಲ್ಲ, ತೆವಳುವುದು... ಜೊತೆಗೆ ಸಖತ್ ಮಳೆ... ಕೊಡೆಯನ್ನು ಬಿಡಿಸಲು ಆಗದ ದುಸ್ಥಿತಿ.
ಇಳಿಯುವಾಗ ಎಚ್ಚರವಹಿಸುವುದು ಕಡ್ಡಾಯ...
ಗಡಾಯಿಕಲ್ಲಿನ ಹಾದಿಯಲ್ಲಿ ಅರಳಿದ ಹೂಗಳು...
"If all my friends were flowers, I would look around and pick you"
- Karae Daley
ಕಲ್ಲಿಗಂಟಿ ಅರಳಿದ ಹೂಗಳನ್ನು ನೋಡಿ ಅನುಭವಿಸುವುದೇ ಸೋಜಿಗ...
ಮೋಡ ತೆವಳಿದಾಗ ಕಂಡ, ನಾವು ಚಾರಣಿಸಿದ ಗಡಾಯಿಕಲ್ಲು... ಅನುಭವ ರಸದೌತಣ... ನೀವು ಹೋಗಿ ಬನ್ನಿ, ಆದರೆ ಮಳೆಗಾಲದಲ್ಲಿ 'ಜಾರು ಜಾಗೃತೆ'.
ಸಂಜೆ 3.30 ಗಂಟೆ ಹೊತ್ತಿಗೆ ಗಡಾಯಿಕಲ್ಲನ್ನು ಇಳಿದು ಬಂದೆವು. ಚಾರಣವಂತೂ ಅಮೋಘ ಅನುಭವ. ಬೆಳಗಿನ ನಿರಾಶೆಯನ್ನು ಮರೆಮಾಚಿ ಬಿಟ್ಟಿತು. ಹೊಸ ಯೋಜನೆಗಳೊಂದಿಗೆ ಮತ್ತೆ ಮನೆಯ ದಾರಿ ಹಿಡಿದೆವು... ವಿಶ್ವ ಸ್ನೇಹಿತರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಸಾಧ್ಯವಾದುದಕ್ಕೆ ಗೆಳೆಯರೆಲ್ಲರಿಗೂ ಧನ್ಯವಾದಗಳು.
"Never look back...
Never regret...
Never remember
the people you've
met.
Never begin...
And never end...
Never say never
when it comes
to your friends!"
-Aliza Llaguno
ಕೊನೆಯದಾಗಿ:
ಗಡಾಯಿಕಲ್ಲನ್ನು ಏರಲು ಹೊಡುವವರು ತುಂಬಾ ಜಾಗರೂಕತೆಯಿಂದ ಹತ್ತುವುದು ಉತ್ತಮ, ಅದರಲ್ಲೂ ಮಳೆಗಾಲದಲ್ಲಿ ತುಂಬಾ ಜಾಗರೂಕತೆಯಿಂದ ಏರಬೇಕು. ಕಲ್ಲುಗಳು ತುಂಬಾನೇ ಜಾರುತ್ತವೆ. ಕಡಿದಾದ ಏರುವಿಕೆಯಾಗಿದೆ. ಅಜಾಗರೂಕತೆ ಅಪಾಯಕ್ಕೆ ಆಹ್ವಾನ.
ತಿನ್ನಲು, ಕುಡಿಯಲು ತೆಗೆದುಕೊಂಡು ಹೋಗುವ ಪ್ಲಾಸ್ಟಿಕ್ ಗಳನ್ನು ಹಾಗು ಬಾಟಲ್ ಗಳನ್ನು ಮೇಲೆಲ್ಲೂ ಬಿಸಾಕದೆ. ವಾಪಸ್ ತಂದು ಕೆಳಗೆ ಇಟ್ಟಿರು ಡಸ್ಟ್ ಬಿನ್ ಗಳಿಗೆ ಹಾಕುವುದು. ಪರಿಸರ ಸಂರಕ್ಷಣೆ ಹಾಗು ಗಡಾಯಿಕಲ್ಲಿನ ಸೌಂದರ್ಯವನ್ನು ಹೆಚ್ಚಿಸುತ್ತದೆ.
ದೂಮಪಾನ ಹಾಗು ಬೆಂಕಿ ಹಚ್ಚುವುದು ಸಮಂಜಸವಲ್ಲ.
ಸ್ಮಾರಕಗಳಲ್ಲಿ ಗೋಡೆ ಬರಹಕ್ಕೆ ಅವಕಾಶ ಕೊಡುವುದು ಸ್ಮಾರಕದ ಸೌಂಧರ್ಯವನ್ನು ಕೆಡಿಸುತ್ತದೆ.
ಸರ್ಕಾರವು ಈ ರಾಷ್ಟೀಯ ಸ್ಮಾರಕವನ್ನು ಉಳಿಸಿಕೊಳ್ಳುವಲ್ಲಿ ಒಲವನ್ನು ಬೆಳೆಸುವುದು ಅಗತ್ಯ ಹಾಗು ಗಡಾಯಿಕಲ್ಲನ್ನು ಏರುವವರ ದ್ಯೇಯವು ಕೂಡ ಅದೇ ಆಗಿರಲಿ.