Monday, July 15, 2013

ಎರ್ಮೈ ಜಲಪಾತ ಮತ್ತು ಬೈಕಿಂಗ್

ಮಳೆಗಾಲದ ಪಶ್ಚಿಮ ಘಟ್ಟದ ರೋಹಣ ಅನುಭವ ಭಾಗ - ೨ ನಿಮ್ಮ ಮುಂದಿಡಲು ಮನ ಉತ್ಸುಕವಾಗಿದೆ. ಈ ಭಾನುವಾರ ಬೈಕಿಂಗ್ನ ಮಜಾ ಅನುಭವಿಸುವ ತವಕದಿಂದ ಗೆಳೆಯರ ಜತೆಗೂಡಿ ಜೋಗ್ ಜಲಪಾತಕ್ಕೆ ಹೋಗುವ ಯೋಜನೆಯಾಗಿತ್ತು. ಅರಬ್ಬಿ ಸಮುದ್ರದಲ್ಲಿ ಹವಾಮಾನದ ಏರುಪೇರಿನಿಂದಾಗಿ, ಹಿಂದಿನ ಮೂರು ದಿನಗಳಿಂದಲೂ ಬಿಡದೆ ಮಳೆರಾಯ ಕಾಡುತ್ತಿದ್ದ. ಅದರಿಂದ ಜೋಗ್ ಜಲಪಾತಕ್ಕೆ ಬೈಕಿಂಗ್ ಮಾಡುವ ಇರಾದೆ ಮುಂದೂಡಿ ಎರ್ಮೈ ಜಲಪಾತ ಹಾಗು ಚಾರ್ಮಾಡಿ ಸುತ್ತಾಡಲು ಬೆಳ್ಳಂಬೆಳಗ್ಗೆ ಹೊರಟೆವು. 

ಕಾರಿಂಜ ಕ್ರಾಸ್ ನಲ್ಲಿ ಭಟ್ಟರ ಹೋಟೇಲ್ ನಲ್ಲಿ ಬೆಳಗ್ಗೆ ತಿಂಡಿ ಮುಗಿಸಿ ಎರ್ಮೈ ಜಲಪಾತಕ್ಕೆ ಪ್ರಯಾಣ ಮುಂದುವರೆಯಿತು. ಮಳೆಗಾಲದಲ್ಲಿ ಬೈಕಿಂಗ್ ಮಾಡುವ ಖುಷಿ ಅನುಸ್ಮರಣೀಯ. ಆದರೆ ಅಷ್ಟೇ ಭಯಾನಕ ಕೂಡ. ಸ್ವಲ್ಫ ಎಡವಿದರೂ ಆಸ್ಫತ್ರೆ ಪ್ರಯಾಣ ಗ್ಯಾರಂಟಿ. 

ಸುಮಾರು ೮.೩೦ಕ್ಕೆ ಗೆಳೆಯನ ಮನೆಗೆ ಬಂದಿಳಿದ ನಮಗೆ ಅಮ್ಮ ಮಾಡಿಕೊಟ್ಟ ಚಾಯ್ ಮೈ ಬಿಸಿ ಮಾಡಿತು. ಗೆಳೆಯನ್ನು ಕೂಡಿಸಿಕೊಂಡು ಎರ್ಮೈ ಜಲಪಾತಕ್ಕೆ ಹೊರಟ ನಮಗೆ ಹಳ್ಳಿಯ ಹಾದಿಯ ಬೈಕಿಂಗ್ ಕಲರ್ ಸಿನಿಮಾದಲ್ಲಿ ತೋರಿಸಿದಂತೆ ಮೋಹಕವಾಗಿತ್ತು.



ಸುಮಾರು ೯ ಗಂಟೆಗೆ ಜಲಪಾತದ ಹಾದಿ ಹಿಡಿದ ನಾವು ಗ್ರಾಮಸ್ಥರೇ, ನದಿಗಳಲ್ಲಿ ಸಿಗುವ ಕಲ್ಲುಗಳಿಂದ, ಕಾಡು ಬಳ್ಳಿ ಹಾಗು ಅಡಿಕೆ ಮರಗಳನ್ನು ಬಳಸಿ ನಿರ್ಮಿಸಿದ ಸೇತುವೆ ದಾಟಿ ಮುಂದುವರೆದೆವು. ಕರಾವಳಿ, ಮಲೆನಾಡಿನ ಗ್ರಾಮಗಳಲ್ಲಿ ಇದು ಸಾಮಾನ್ಯವಾದರೂ, ಅದನ್ನು ನಿರ್ಮಿಸಿದ ಗ್ರಾಮಸ್ಥರನ್ನು ಮೆಚ್ಚಲೇ ಬೇಕು. ನದಿಯಲ್ಲಿ ಸಿಗುವ ಕಲ್ಲುಗಳನ್ನು ಹಾಗು ಕಾಡು ಬಳ್ಳಿಗಳನ್ನು ಬಳಸಿ ನಿರ್ಮಿಸಿದ ಆಧಾರ ಸ್ತಂಭ ಈಗಿನ ತಾಂತ್ರಿಕತೆಗೆ ಸವಾಲಾಗದೆ ಇರದು.

ದಾರಿಯುದ್ದಕೂ ಕಾಣುವ ಹಸಿರು ಚಾರಣಿಗರ ಉಸಿರಲಿ ತಂಪನ್ನೆರೆಯುವುದು. ಸ್ಪಟಿಕ ಸ್ಪಷ್ಟ ಹೊಳೆ ನೀರು ಮನಸೋಲಿಸುತ್ತದೆ. ದಾರಿ ಪಕ್ಕದಲ್ಲಿ ಗ್ರಾಮಸ್ಥರ ಮನೆಗಳನ್ನು ಕಾಣಬಹುದು. ಕೆಲವೇ ದಿನಗಳ ಹಿಂದೆ ಕಾಡಾನೆಗಳು ಬೇಟಿಕೊಟ್ಟಿರುವುದಕ್ಕೆ ಅವುಗಳು ಹಾಕಿದ ಲದ್ದಿಗಳೇ ಸಾಕ್ಷಿ. 



ನೀರ ದಾರೆಗಳ ಪಕ್ಕ ಇಂತಹ ಜಲವಿದ್ಯುತ್ ಸ್ಥಾವರಗಳು ಕೂತೂಹಲ ಮೂಡಿಸುತ್ತವೆ. ಜಲವಿದ್ಯುತ್ ಇಲ್ಲಿನ ಗ್ರಾಮಸ್ಥರ ಬೆಳಕಿನ ಮೂಲ ಕೂಡ. ಇದು ಸುಮಾರು ೫ ಮನೆಗಳಿಗೆ ದಿನದ ೨೪ ಗಂಟೆ ವಿದ್ಯುತ್ ಪೂರೈಸುತ್ತದೆ.





                            ಎರ್ಮೈ ಜಲಪಾತದ ಹಾದಿಯಲ್ಲಿ ಸಿಗುವ ಚಿಕ್ಕ ಜಲಪಾತ ಮನಸೋರೆಗೊಳ್ಳುತ್ತದೆ. 




ಎರ್ಮೈ ಜಲಪಾತ ನೋಡುಗರ ಗಮನ ಸೆಳೆಯುವುದೆ ಹೀಗೆ. ಅಧ್ಬುತ ಚಿತ್ರಣ ಕಣ್ಮಣ ಸೆಳೆಯುವುದೆ ಹೀಗೆ. ಸುಮಾರು ೧೫ ಮೀಟರ್ ಎತ್ತರದಿಂದ ದುಮುಕುವ ಈ ಜಲಪಾತ ಎರಡು ಹಂತಗಳಲ್ಲಿ ಬೀಳುತ್ತದೆ. ಅದರ ನೋಟವೇ ಸುಂದರ. ಜಲಪಾತದ ನೀರು ಮೈಚಳಿ ಹಿಡಿಸುತ್ತದೆ. ಸೂರ್ಯನ ಕಿರಣಗಳು ಜಲಪಾತದ ಮೆರಗನ್ನು ಹೆಚ್ಚಿಸುತ್ತ ಅತ್ಯುನ್ನತ ಚಿತ್ರಣ ಕಣ್ಮಂದೆ ಇಡುತ್ತದೆ. ಸ್ಪಟಿಕರೂಪಿ ನೀರು ಬೆಳಕನ್ನು ಪ್ರತಿಬಿಂಬಿಸುವುದು ಮನಸ್ಸಿನಲ್ಲಿ ಪ್ರತಿಫಲನವೆಬ್ಬಿಸುತ್ತದೆ. 



 ಅದೆಷ್ಟೋ ಶತಮಾನಗಳಿಂದ ದುಮುಕುವ ನೀರು ಜಲಪಾತದ ದೃಶ್ಯವನ್ನು ಅಮೋಘವಾಗಿಸಿದೆ. ಕಲ್ಲುಗಳನ್ನು ಕೊರೆದು ಅರ್ಧ ಚಂದ್ರಾಕೃತಿಯಾಗಿಸಿ ಗ್ರ್ಯಾಂಡ್ ಕೇನ್ಯಾನ್ ಕಣಿವೆಯ ನೆನಪಾಗಿಸುವುದರಲ್ಲಿ ವಿಶೇಷವೇನಲ್ಲ.


ಎರ್ಮೈ ಜಲಪಾತದ ವಿಶೇಷಗಳಲ್ಲೊಂದು ಅದು ಬೀಳುವ ಬಂಡೆಯ ಮಧ್ಯೆಯ ಜಾಗ. ಜಲಪಾತದ ಬದಿಯಲ್ಲಿ ಬಂಡೆ ಹತ್ತಲು ಕ್ಲಿಷ್ಟಕರ ದಾರಿಯಿದೆ. ಅದರೊಳಗೆ ಸುಮಾರು ೧೦ ಜನ ಕೂರಲು, ಮಲಗಲು ಪ್ರಾಶಸ್ತ್ಯ ಜಾಗ ಇದೆ. ರಾತ್ರಿ ಕಳೆಯಲು ಇದಕ್ಕಿನ್ನ ಪ್ರಶಸ್ತ್ಯ ಜಾಗ ಇಲ್ಲಿ ಬೇರಿಲ್ಲ. ಬಂಡೆಗಳ ಮಧ್ಯೆ ತೆವಳಿಕೊಂಡು ಸಾಗಿ ಜಲಪಾತದ ನಡುವನ್ನು ಮುಟ್ಟಿ ನೀರು ದುಮುಕುವ ಬಲವನ್ನು ಕಂಡುಕೊಳ್ಳಬಹುದು. ಇದು ಅತ್ಯಂತ ಆನಂದವನ್ನು ಜೊತೆಗೆ ಭಯವನ್ನು ಉಂಟುಮಾಡುತ್ತದೆ.



ಬಂಡೆಗಳ ಮಧ್ಯದಿಂದ ಕೇಳಗೆ ನೋಡುವಾಗ ಹೆದರಿಕೆಯುಂಟಾಗುವುದು ಮಾತ್ರ ಸತ್ಯ. ಮನಸ್ಸು ಅಬ್ಬಾ! ಅಂತು. ಪ್ರಕೃತಿಯು ಮೋಡಿಮಾಡುತ್ತಾ ಸಾಗುತ್ತದೆ.






 ಜಲಪಾತದ ಬಂಡೆಗಳ ಮಧ್ಯೆ ಕಾಣಸಿಗುವ ಚಿತ್ತಾರ ಇವು... ಪ್ರಕೃತಿ ಹೃದಯ ವಿಶಾಲ...


ಸುಮಾರು ೧೧.೩೦ ಕ್ಕೆ ಮನಸ್ಸಿಲ್ಲದ ಮನಸಲಿ ವಾಪಾಸು ಹೊರಟ ನಾವು ಮತ್ತೆ ಗೆಳೆಯನ ಮನೆಗೆ ಬೇಟಿಯಿತ್ತು ಬಿಸಿಬಿಸಿ ಚಾಯ್ ಕುಡಿದು, ಬೆಲ್ಲ ಕಬ್ಬನ್ನು ಕಟ್ಟಿಕೊಂಡು ಚಾರ್ಮಾಡಿ ಕಡೆ ಹೊರಟೆವು.

Sunday, July 14, 2013

ಮುಂಗಾರು ಮಳೆಗೆ ವೆಂಕಟಗಿರಿಯ ಮೆರಗು

             ಚಾರಣಿಗರ ಸ್ವರ್ಗ, ಪ್ರಕೃತಿ ಪ್ರಿಯರ ತವರು ಪಶ್ಚಿಮ ಘಟ್ಟ. ಮಳೆಯಿರಲಿ, ಚಳಿಯಿರಲಿ ಅಥವಾ ಬಿಸಿಲಿರಲಿ ಪಶ್ಚಿಮ ಘಟ್ಟದ ಸೋಬಗು ಮನಮೋಹಕ.ಈ ಮೂರು ಋತುಗಳಲ್ಲಿ ಚಾರಣಿಸಿ ಅನುಭವಿಸುವ ತೃಪ್ತಿ ಅನುಪಮ. ಮಳೆಗಾಲದಲ್ಲಿನ ಚಾರಣವಂತು ಅತ್ಯದ್ಭುತ. ನಿತ್ಯ ಹರಿದ್ವರ್ಣದ ಕಾಡು, ಬೆಟ್ಟಗಳ ಒಳಹೊಕ್ಕರೆ ಹೊರ ಪ್ರಪಂಚದ ಅರಿವು ಬೇಡವೆನಿಸುವಷ್ಟು ಮೋಹಕ  ಪಶ್ಚಿಮ ಘಟ್ಟದ ಸಾಲು. ಅಂತಹ ಅನುಭವ ವೆಂಕಟಗಿರಿಯ ಚಾರಣದಲ್ಲಿ ನನಗಾಯಿತು.

             ಈ ಮಳೆಗಾಲದ ಭಾನುವಾರ, ಚಾರಣ ಹಾಗು ಪ್ರಕೃತಿ ಮಡಿಲನ್ನು ಆಸ್ವಾದಿಸುವ ಸಮಾನಮನಸ್ಕರಾದ ನಾವು ಗೆಳೆಯರು ವೆಂಕಟಗಿರಿಗೆ ಚಾರಣಿಸಲು ಹೊರಟೆವು. ಪ್ರಕೃತಿಯ ದಯೆಯೋ ನಮ್ಮ ಲಕ್ಕೋ ಬಂಟ್ವಾಳದಲ್ಲಿ ದಾರಾಕಾರ ಸುರಿಯುತ್ತಿದ್ದ ಮಳೆ, ಚಾರಣಿಸಲು ಆರಂಭಿಸಿದಾಗ ಮಾಯವಾಗಿತ್ತು. ಹೊಚ್ಚ ಹೊಸ ಹಸಿರು ಸೀರೆಯುಟ್ಟು ಕಂಗೊಳಿಸುತ್ತಿದ್ದ ನಿಸರ್ಗದ ಸೆರಗ ಹಿಡಿದು ಹೊರಟವರಿಗೆ ಹೆಜ್ಜೆ ಹೆಜ್ಜೆಗೂ ರಮಣೀಯ ದೃಶ್ಯಗಳ ಸರಮಾಲೆ. ಜೋತೆಯಲಿ ಇಂಡಿಯಾ ಕ್ರಿಕೆಟ್ ಮ್ಯಾಚ್ ನಡುವೆ ಕಿರಿಕಿರಿ ಮಾಡುವ ಅರ್ಡ್ವ್ಟ್ಸ್ಸ್ಮೆಂಟ್ ನ ಹಾಗೆ ಹೆಜ್ಜೆ ಹೆಜ್ಜೆಗೂ ಇಂಬಳಗಳ ಕಾಟ... ಕಿತ್ತು ಕಿತ್ತು ಬಿಸಾಕಿದಷ್ಟು ಕಾಲಿಗೆ ಹತ್ತಿಕೊಳ್ಳುವ ಇಂಬಳಗಳು, ಕಾಲು ತುಂಬಾ ನೆತ್ತರ ಮಳೆ.



ದಾರಿಯುದ್ದಕೂ ಜೊತೆಯಾಗುವ ನೀರ ದಾರೆಗಳು, ಝರಿಗಳು ಅಮೋಘ ಅನನ್ಯ ಹಿತಾನುಭವ ಕೊಡುತ್ತದೆ. ವೆಂಕಟಗಿರಿಯ ಚಾರಣ ಹೆಜ್ಜೆ ಹೆಜ್ಜೆಗೂ ಸುಂದರ ಪ್ರಕೃತಿಯ ಚಿತ್ತಾರಗಳನ್ನು ಕಣ್ಣ ಮುಂದೆ ತಂದಿಡುತ್ತದೆ.



ದಾರಿಯಲ್ಲಿ ಸಿಗುವ ರೈಲು ಮಾರ್ಗದಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿ ನಿಸರ್ಗ ಸೌಂದರ್ಯ ಅನುಭವಿಸಿ ಮುನ್ನಡೆಯುವುದು ಆರಾಮದಾಯಕ 



ವೆಂಕಟಗಿರಿಯನ್ನು ಹತ್ತುವಾಗ ಕಾಣುವ ಇಂತಹ ಮನೋಹರ ದೃಶ್ಯಗಳು ಮನುಷ್ಯರನ್ನು ಸ್ವರ್ಗ ವಿಹಾರಿಗಳನ್ನಾಗಿಸದೆ ಇರದಲ್ವೇ? ಇಂತಹ ಪ್ರಕೃತಿ ಕಾವ್ಯಗಳದೆಷ್ಟೋ ವೆಂಕಟಗಿರಿಯ ಮಡಿಲಲ್ಲಿ ತುಂಬಿದೆ. ಹಾವು ಸರಿದಾಡಿದಂತೆ ಕಾಣುವ ನದಿ ಮೂಕವಿಸ್ಮಿತರನ್ನಾಗಿಸದೆ ಇರದು.




ವೆಂಕಟಗಿರಿಯಿಂದ ಕಾಣುವ ಮುಗಿಲು ಬೆಟ್ಟವು ಮೋಡಗಳಿಂದ ಆವರಿಸಿ.. ಬೆಟ್ಟವನ್ನು ಕಣ್ಣಮುಚ್ಚಾಲೆ ಆಡಿಸುತ್ತಿತ್ತು.


ಚಾರಣದಲ್ಲಿ ಎದುರಾದ ಕೆಲವೊಂದು ಅಪರೂಪದ ಪ್ರಕೃತಿ ವೈವಿಧ್ಯಗಳು. 





ಕಾಡು ನೆಲ್ಲಿ ತುಂಬಾ ಸ್ವಾದಿಷ್ಟ.







ದೂರದಿಂದ ಕಾಣುವ ವೆಂಕಟಗಿರಿಯ ನೋಟ.. ನಾವು ಹತ್ತಿ ಇಳಿರೋದು ಇದೇ ಬೆಟ್ಟ.



ಕಾಲು ತುಂಬಾ ಜಿಗಣೆಗಳಿಂದ ಕಚ್ಚಿಸಿಕೊಂಡು, ರಕ್ತದಾನ ಮಾಡಿ ಬಂದೆವು... ಅವಿಸ್ಮರಣೀಯ ಅನುಭವ.

Monday, January 28, 2013

ತೆಂಗಿನಮರಗಳ ದ್ವೀಪ - ಸೈಂಟ್ ಮೇರಿ ದ್ವೀಪ

ತೆಂಗಿನಮರಗಳ ದ್ಡೀಪಕ್ಕೆ ಹೋಗಲು ಬೋಟ್ ಹತ್ತುವ ಸ್ಥಳ- ಮಲ್ಪೆ ಹಾರ್ಬರ್.  ಜೊತೆಯಲ್ಲಿ ಬಾಯಿ ತಂಪಿಗೆ ಐಸ್ ಕ್ಯಾಂಡಿ.

ಬೇಟೆಗಾಗಿ ಹೊಂಚುಹಾಕುತ್ತೀರುವ ಕೊಕ್ಕರೆ. ಚಿತ್ರ ಮಲ್ಪೆ ಹಾರ್ಬರ್ನಲ್ಲಿ


ತೆಂಗಿನಮರಗಳ ದ್ಡೀಪ - ಹೆಸರಿಗೆ ತಕ್ಕಂತೆ ದ್ವೀಪದ ತುಮಬಾ ಇರುವ ತೆಂಗಿನಮರಗಳು. ಪುಣ್ಯಕ್ಕೆ ಮಂಗಗಳ ಹಿಡಿತದಿಂದ ಪಾರಾದ ತೆಂಗಿನಮರಗಳು. ಮಲ್ಪೆ ಹಾರ್ಬರ್ ನಿಂದ ದ್ಡೀಪಕ್ಕೆ ಸುಮಾರು 20 ನಿಮಿಷಗಳ ಸಮುದ್ರ ಪಯಣ ಇದೆ. ಪಯಣದುದ್ದ ಹಾರುವ ಮೀನು ಹಾಗು ಡಾಲ್ಪಿನ್ ಕಾಣಲು ಸಿಗಬಹುದು. ಈ ಸಲ ನನಗೆ ಹಾರುವ ಮೀನು ಹಾಗು ಡಾಲ್ಪಿನ್ ನೋಡುವ ಭಾಗ್ಯ ಸಿಕ್ಕಿತು, ಆದರೆ ಪೋಟೋ ಕ್ಲಿಕ್ಕಿಸಲಾಗಲಿಲ್ಲ.

ಸ್ಪಟಿಕ ನೀರು ತೆಂಗಿನಮರಗಳ ದ್ವೀಪದ ಸೊಬಗಲ್ಲೊಂದು. ನೀರಿಗಿಳಿಯಲು ಸಖತ್ ಮಜಾ ಅಗಿರತ್ತೆ. ಸೂರ್ಯನ ರಶ್ಮಿಗೆ ನೀರು ಸ್ಪಟಿಕದಷ್ಟು ಪಳಪಳ.

ತೆಂಗಿನಮರಗಳ ದ್ವೀಪ ಅತ್ಯಾಕರ್ಷಕ ಕಲ್ಲುಗಳ ದ್ವೀಪ.

ಹಲಸಿನ ಹಣ್ಣಿನ ಮೇಲ್ಮೈನಂತಿನ ರಚನೆಯ ಕಲ್ಲುಗಳು ಅಚ್ಚರಿಯನ್ನು ಮೂಡಿಸುವುದರಲ್ಲಿ ಮೋಸಮಾಡುವುದಿಲ್ಲ.

ಅತ್ಯಾಕರ್ಷಕ ರಚನೆಯ ಕಲ್ಲುಗಳ ರಚನೆ. ಇಲ್ಲಿನ ವೈಶಿಷ್ಟ್ಯ.

ತೆಂಗಿನಮರದ ದ್ವೀಪ ಪ್ರೇಮಿಗಳ ಸ್ವರ್ಗ. ದ್ವೀಪದ ತುಂಬಾ ಪ್ರೇಮಿಗಳ ಕಲರವ.


ಸ್ಪಟಿಕ ಸ್ವಚ್ಚವಾದ ನೀರಿಗಿಳಿದು ಮನಸ್ಸೊಇಚ್ಚೆ ನೀರಾಟವಾಡಲು ಪ್ರಶಸ್ತ ತಾಣ ಇದು.

ಬದುಕು ಹೀಗೆನೆ... ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದು.

ಚಾರ್ಮಾಡಿಯ ಬೆಟ್ಟಗಳೊಳಗೊಂದು ಸುತ್ತು.

ಚಾರ್ಮಾಡಿಯೆ ಹಾಗೆ... ಒಳಹೊಕ್ಕಿದಷ್ಟು ಗಮ್ಯವಾಗೆ ಉಳಿಯುವ ಅಚಲೆ. ಅಮೋಘ ಪ್ರಕೃತಿ ಸೌಂದರ್ಯವನ್ನು ಒಡಲೊಲ್ಲಡಗಿಸಿದ ಚತುರೆ. ಅದಕ್ಕೊಂದು ಉದಾಹರಣೆ ಈ ಚಿತ್ರ.


ಸೂರ್ಯ ಪೂರ್ವದ ದಾರಿಗೆ ಅಡಿಯಿಡುವ ಮುಂಚೆಯೇ ಚೀಲವನ್ನು ಹದೆಗೇರಿಸಿ ಹೊರಟ ನಾವು ಬೆಳಗು ರಂಗೇರುವ ಮುಂಚೆಯೆ ಬೆಟ್ಟಗಳ ತುದಿಯಲ್ಲಿ ನಡೆಯಲು ಶುರುಹಚ್ಚಿಕೊಂಡೆವು.

ಪಶ್ಚಿಮಘಟ್ಟಗಳ ಬೆಟ್ಟಸಾಲುಗಳೇ ಹಾಗೆ, ಮೋಹಕ, ಮನೋಹರ, ರುದ್ರ ರಮಣೀಯ... ನೋಡಿದಷ್ಟು ರಮಣೀಯ, ಮೋಹಿಸಿದಷ್ಟು ಮೋಹಕ. ನಡೆದಷ್ಟೂ ಚಂಚಲ.

ಬೆಟ್ಟಗಳ ಹಿಂದೊಂದು ಬೆಟ್ಟಗಳ ಮೆರವಣಿಗೆ... ಟೋಪಿ ಹಾಕಿದ ಬೆಟ್ಟ, ಟೋಪಿ ಹಾಕಿಸುವ ಬೆಟ್ಟ, ಬೆಟ್ಟಗಳ ನಡುವೆ... ಮತ್ತೇರಿಸಿ ಮರೆಯಾಗಿಸುವ ಶೋಲಾ ಅರಣ್ಯ. ಬನ್ ನಡುವಿಂದಿಣುಕುವ ಜಾಮ್ ನ ಹಾಗೆ.

ಜನವರಿಯ ಚಳಿಗೆ ಬೆಳಗ್ಗಿನ ಬಿಸಿಲಿಗೆ ಬೆಟ್ಟಗಳ ತುದಿಯಲ್ಲಿ ನಡೆಯುವುದೇ ಮನಸ್ಸಿಗೆ ಆನಂದ, ಅಹ್ಲಾದ! ರೆಡ್ ರೋಸ್ ಚಾ ಕುಡಿದಂತೆ. ಪ್ರಾಣಿಗಳು ನಡೆದಾಡುವ ಹಾದಿಯೆ ನಮಗೆದುರು.

ಟೋಪಿವಾಲ ಬೆಟ್ಟ ಅಂಟಿಕೊಂಡ ಶೋಲಾ ಅರಣ್ಯ

ಚಾರ್ಮಾಡಿಯ ಪ್ರದೇಶಗಳನ್ನು ಗುರುತಿಸುತ್ತಿರುವ ಕಾಮತರು ಜೊತೆಯಲ್ಲಿ ರಾಕೇಶ್ ಹಾಗು ಸುದೀರ್. ಕಾಮತರ ಜೋಕುಗಳು ಜೊತೆಯದ್ದವರಿಗೆ ನಗೆಬುಗ್ಗೆಗಳು.

ಗಿಡುಗಬೆಟ್ಟ - ಬೇಟೆಗಾಗಿ ಹಾತೊರೆಯುತ್ತಿರುವ ಗಿಡುಗ.

ಮಾಯಾ ಬೆಟ್ಟಗಳು... ಒಂದರಹಿಂದೊಂದು ಅಡಗಿಕುಳಿತಿರುವ ನೋಟ. ನಡೆದಷ್ಟು ಮುಗಿಯದ ಹಾದಿ.
ಮಂಜಿನಹೊದಿಕೆಯೊಳಗಿನ ಬೆಟ್ಟ

ಶೋಲಾ ಅರಣ್ಯದಲ್ಲಿ ಕಾಣಸಿಗುವ ಸುಂದರ ಪುಪ್ಪಗಳಲ್ಲೊಂದು. ಪಶ್ಚಿಮಘಟ್ಟಗಳು ಅಮೋಘ ಪುಪ್ಪಗಳ ಉದ್ಯಾನ.

ಒಂದು ವಾರಾಂತ್ಯದ ಸುತ್ತಾಟದ ಬಗ್ಗೆ.

ಜುಲೈ ತಿಂಗಳ ಒಂದು ವಾರಾಂತ್ಯ ಗೆಳೆಯರ ಜೊತೆ ಸೇರಿ ಬೆಂಗಳೂರಿನಿಂದ ತಲಕಾಡು, ಬಿಳಿಗಿರಿರಂಗನಬೆಟ್ಟ, ಚಾಮರಾಜನಗರ, ಗುಂಡ್ಲುಪೇಟೆ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗು ಬಂ...